Banner Ad

ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ, ಲಾರಿಯ ಟ್ಯಾಂಕ್‌ನಿಂದ ಡೀಸೆಲ್ ಸೋರಿಕೆಯಾಗಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾದ ಘಟನೆ ನಡೆದಿದೆ. ಲಾರಿ ಬಿದ್ದ ರಭಸಕ್ಕೆ ರಸ್ತೆಯ ಮೇಲೆಲ್ಲಾ ಡೀಸೆಲ್ ಹರಡಿದ್ದರಿಂದ ರಸ್ತೆ ಅತಿಯಾಗಿ ಜಾರುತ್ತಿತ್ತು. ಇದು ದ್ವಿಚಕ್ರ ವಾಹನಗಳು ಸ್ಕಿಡ್ ಆಗುವ ಹಾಗೂ ಇತರ ವಾಹನಗಳು ಅಪಘಾತಕ್ಕೀಡಾಗುವ ಭೀತಿಯನ್ನು ನಿರ್ಮಿಸಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ 112 ತುರ್ತು ವಾಹನದ ಸಿಬ್ಬಂದಿಗಳಾದ ಅರುಣ ರಾವಳ ಹಾಗೂ ವಿನಾಯಕ ಎಲ್, ಕೂಡಲೇ ಕಾರ್ಯಪ್ರವೃತ್ತರಾಗಿ ರಸ್ತೆಗೆ ಮಣ್ಣು ಮತ್ತು ನೀರನ್ನು ಸಿಂಪಡಿಸಿ ಜಾರುತ್ತಿದ್ದ ರಸ್ತೆಯನ್ನು ಸ್ವಚ್ಛಗೊಳಿಸಿದರು. ಇವರ ಈ ಸಮಯಪ್ರಜ್ಞೆಯು ಸಂಭಾವ್ಯ ಭಾರೀ ಅನಾಹುತವನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಈ ತ್ವರಿತ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Banner Ad
Banner Ad