ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ ಶಶಿ ಅವರು ಅನಿರೀಕ್ಷಿತ ಭೇಟಿನೀಡಿದರು.
ಇಂದು ಅಪರಾಹ್ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರವಾರ ರವರು ಜೋಯಿಡಾ ತಾಲೂಕಿಗೆ ಅನಿರೀಕ್ಷಿತ ಭೇಟಿ ನೀಡಿ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಯ ವಸ್ತುಸ್ಥಿತಿಯನ್ನು ವೀಕ್ಷಿಸಿದ ಅವರು ಪಿ.ಆರ್.ಡಿ. ಇಂಜಿನಿಯರ್ ಅವರಿಗೆ ಅಗತ್ಯ ಅಂದಾಜು ಪತ್ರಿಕೆಯನ್ನು (Estimate) ತಯಾರಿಸುವಂತೆ ಸೂಚಿಸಿದರು. ಅಲ್ಲದೆ, ಕಚೇರಿಯ ಕಡತಗಳನ್ನು ಪರಿಶೀಲಿಸಿ, ಕಂಡುಬಂದ ನ್ಯೂನ್ಯತೆಗಳನ್ನು ಸರಿಪಡಿಸಿ ವರದಿ ನೀಡುವಂತೆ ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗಕ್ಕೆ ಭೇಟಿ ನೀಡಿ ಸಂಬಂಧಿತ ಕಡತಗಳನ್ನು ಪರಿಶೀಲಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:ಗೆ ಭೇಟಿ ನೀಡಿ ನೂತನವಾಗಿ ನಿರ್ಮಿಸಲಾದ ವಸತಿ ನಿಲಯದ ಕಾಮಗಾರಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ಇಂಜಿನಿಯರ್ ಅವರೊಂದಿಗೆ ಅನುದಾನ ಬಿಡುಗಡೆ ಕುರಿತು ಚರ್ಚಿಸಿ ವರದಿ ಸಲ್ಲಿಸಲು ಸೂಚಿಸಿದರು.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಆರೋಗ್ಯ, ವಸತಿ, ಊಟ, ವಿದ್ಯಾಭ್ಯಾಸ ಹಾಗೂ ಸ್ವಚ್ಛತೆ-ನೈರ್ಮಲ್ಯದ ಬಗ್ಗೆ ವಿಚಾರಿಸಿ ದಾಖಲೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕುಂಬಾರವಾಡ ವಸತಿ ನಿಲಯದ ಸ್ಥಳಾಂತರದ ಕುರಿತು ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ತಾಲೂಕು ಪಂಚಾಯತ್ ಜೋಯಿಡಾ ಕಾರ್ಯನಿರ್ವಾಹಕ ಅಧಿಕಾರಿ ಎನ್ ಭಾರತಿ ಅವರೊಂದಿಗೆ ಸಮಾಲೋಚನೆ ನಡೆಸಿ, ‘VB-G RAM G’ ಯೋಜನೆಯಡಿ ಪ್ರಗತಿ ಕುಂಠಿತಗೊಂಡಿರುವುದರ ಬಗ್ಗೆ ಚರ್ಚಿಸಿದರು. ಹಾಗೂ ಮಾನವ ದಿನಗಳ ಸೃಜನೆ ಕುಂಠಿತವಾಗಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರು ಶ್ರೀ ಕ್ಷೇತ್ರ ಉಳವಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಹಾಗೂ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯತ ಮಾಜಿ ಸದಸ್ಯರು ಹಾಗೂ ದೇವಸ್ಥಾನ ಕಮಿಟಿಯ ಸಿಬ್ಬಂದಿರವರು ಉಪಸ್ಥಿತರಿದ್ದರು.ಒಟ್ಟಾರೆ ಜಿ ಪಂ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಭೇಟಿ ಅಧಿಕಾರಿ ವರ್ಗದಲ್ಲಿ ಸಂಚಲನ ಮೂಡಿಸಿತು
