ಸುದ್ದಿ ಕನ್ನಡ ವಾರ್ತೆ
ಕಾರವಾರ:ತಾಲೂಕಿನ ಮಾಜಾಳಿಯ ಗಾಂವಗೇರಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯ 66 ರಲ್ಲಿ ಬೈಕ್ ಗೆ ದನ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದ ಬೈಕ್ನ ಹಿಂಬದಿ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸಂಭವಿಸಿದೆ.
ಗುರುವಾರ ರಾತ್ರಿಯ ವೇಳೆ ಮಾಜಾಳಿ ಕಡೆಯಿಂದ ಕಾರವಾರದ ಕಡೆಗೆ ಬೈಕ್ ಸವಾರ ವಿಜಯ ಎಂಬಾತ ತನ್ನ ಬೈಕ್ನ ಹಿಂಬದಿಯಲ್ಲಿ ಮಹೇಂದ್ರ ಎಂಬಾತನನ್ನು ಕುರಿಸಿಕೊಂಡು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ.
ಈ ವೇಳೆ ಗಾಂವಗೇರಿ ಕ್ರಾಸ್ ಹತ್ತಿರ ರಸ್ತೆಗೆ ದನವೊಂದು ಅಡ್ಡ ಬಂದಿದ್ದು, ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರ ವಿಜಯನ ಕಾಲಿಗೆ ಗಾಯವಾಗಿದ್ದರೆ, ಹಿಂಬದಿಸವಾರ ಮಹೇಂದ್ರನ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣ ಆತನನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
