ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಣಬಿ ಸಮುದಾಯವು ತನ್ನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರ ಪದ್ಧತಿಗೆ ಹೆಸರುವಾಸಿಯಾಗಿದೆ. ಈ ಸಮುದಾಯದ ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು ಹಾಗೂ ವಿಶೇಷ ಹಬ್ಬಗಳಲ್ಲಿ ತಯಾರಿಸಲಾಗುವ ‘ವಡೆ’ (ಕೊಂಕಣಿ ಭಾಷೆಯಲ್ಲಿ ‘ವಡೆ’) ವಿಶೇಷ ಸಾಂಪ್ರದಾಯಿಕ ಖಾದ್ಯವಾಗಿ ಗುರುತಿಸಿಕೊಂಡಿದೆ.
ಈ ವಿಶೇಷ ವಡೆಯನ್ನು ಮುಖ್ಯವಾಗಿ ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಅಕ್ಕಿ ಹಿಟ್ಟನ್ನು ಚೆನ್ನಾಗಿ ಕಲಸಿ, ಕೈಯಿಂದ ಗೋಲಾಕಾರದ ಆಕಾರ ನೀಡಿ, ನಂತರ ಕಾದ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೊರಭಾಗ ಗರಿಗರಿಯಾಗಿದ್ದು, ಒಳಭಾಗ ಮೃದುವಾಗಿರುವ ಈ ಸಾಂಪ್ರದಾಯಿಕ ವಾಡಿ ಹಬ್ಬ-ಹರಿದಿನ ಹಾಗೂ ಮದುವೆ ಸಮಾರಂಭಗಳ ಪ್ರಮುಖ ತಿನಿಸಾಗಿದೆ.
ವಡೆ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸುವ ಈ ವಾಡಿಯನ್ನು ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ಒಟ್ಟಾಗಿ ಸೇರಿ ಸಿದ್ಧಪಡಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಮದುವೆ ಮನೆಗಳಲ್ಲಿ ಅತಿಥಿಗಳಿಗೆ ಆತ್ಮೀಯವಾಗಿ ಬಡಿಸುವ ಈ ವಿಶೇಷ ಖಾದ್ಯ ಕುಣಬಿ ಸಮುದಾಯದ ಸಂಸ್ಕೃತಿಯ ಪ್ರತೀಕವಾಗಿದೆ.
ಕುಣಬಿ ಸಮುದಾಯವು ಆಹಾರ ಸಂಸ್ಕೃತಿಯ ಜೊತೆಗೆ ಪ್ರಕೃತಿಯೊಡನೆ ಬೆಸೆದುಕೊಂಡ ಜೀವನಶೈಲಿಯನ್ನು ಇಂದಿಗೂ ಉಳಿಸಿಕೊಂಡಿದೆ. ಸ್ಥಳೀಯವಾಗಿ ಬೆಳೆಯುವ ಕೃಷಿ ಉತ್ಪನ್ನಗಳು ಕಾಡಿನ ಆಹಾರ ಸಂಪನ್ಮೂಲಗಳು ಹಾಗೂ ಸಾಂಪ್ರದಾಯಿಕ ಅಡುಗೆ ವಿಧಾನಗಳು ಅವರ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಜೋಯಿಡಾದಲ್ಲಿ ನಡೆಯುವ ಗೆಡ್ಡೆ-ಗೆಣಸು ಮೇಳವೂ ಈ ಸಮುದಾಯದ ಆಹಾರ ವೈವಿಧ್ಯ ಮತ್ತು ಪರಂಪರೆಯನ್ನು ದೇಶದಾದ್ಯಂತ ಪರಿಚಯಿಸುತ್ತಿದೆ.
ಆಧುನಿಕ ಜೀವನಶೈಲಿಯ ನಡುವೆಯೂ ತಮ್ಮ ಪೂರ್ವಜರ ಪರಂಪರೆಯನ್ನು ಉಳಿಸಿಕೊಂಡಿರುವ ಜೋಯಿಡಾ ಕುಣಬಿ ಸಮುದಾಯದ ‘ವಡೆ ಕೇವಲ ಒಂದು ತಿನಿಸಲ್ಲ, ಅದು ಸಂಸ್ಕೃತಿ, ಒಗ್ಗಟ್ಟು ಮತ್ತು ಆತಿಥ್ಯದ ಸಂಕೇತವಾಗಿದೆ.
