ಸುದ್ದಿ ಕನ್ನಡ ವಾರ್ತೆ
ಗೋಕರ್ಣ: ಆತ್ಮಾಕ್ಷಾತ್ಕಾರಕ್ಕೂ ಶರೀರ ಅಗತ್ಯ, ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಾಧನೆ ಶರೀರದಿಂದಲೇ ಸಾಧ್ಯವಾಗುವುದರಿಂದ ಶರೀರವನ್ನು ಉಳಿಸಿಕೊಳ್ಳಲು ಆಹಾರ ಅತ್ಯಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮಂಗಳವಾರ ‘ಅನ್ನ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ನೀಡಿದ ಅವರು, ಶಿವ-ಪಾರ್ವತಿಯರ ಅನ್ನಪೂರ್ಣೇಶ್ವರಿ ಪ್ರಸಂಗವನ್ನು ವಿವರಿಸಿ ಅನ್ನದ ಮಹತ್ವವನ್ನು ತಿಳಿಸಿದರು.
ಅನ್ನಪೂರ್ಣೇಶ್ವರಿ ಜ್ಞಾನಾನುಗ್ರಹವನ್ನೂ ಮಾಡುತ್ತಾಳೆ. ಶಂಕರಾಚಾರ್ಯರ ಅನ್ನಪೂರ್ಣೇಶ್ವರಿ ಸ್ತೋತ್ರದಲ್ಲೂ ಜ್ಞಾನ, ಭಕ್ತಿ ಹಾಗೂ ಮುಕ್ತಿಗೆ ಅನ್ನದ ಮಹತ್ವವನ್ನು ಪ್ರತಿಪಾದಿಸಲಾಗಿದೆ ಎಂದರು.
ಖ್ಯಾತ ಜ್ಯೋತಿಷಿ ಪಾಳಕಾಡು ವೆಂಕಟೇಶ ಭಟ್, ಶಕಟಪುರ ಮಠದ ವ್ಯವಸ್ಥಾಪಕ ರಾಘವ, ನಿವೃತ್ತ ಆದಾಯ ತೆರಿಗೆ ಆಯುಕ್ತ ಗಿರೀಶ ಕೋಣಮೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಣಪತಿ ವೆಂಕಟರಮಣ ಹೆಗಡೆ ಕಾನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು.
ರಾಣಾಯನೀಯ ಶಾಖೆಯ ಸಾಮವೇದ ಪಾರಾಯಣ: ಚಾತುರ್ಮಾಸ್ಯದ ಅಂಗವಾಗಿ ಸಾಮವೇದದ ರಾಣಾಯನೀಯ ಶಾಖೆಯ ಪಾರಾಯಣ ಸೆ.೧ರಿಂದ ೫ರವರೆಗೆ ನಡೆಯಲಿದ್ದು, ವೇ.ಮೂ. ಸುಬ್ರಹ್ಮಣ್ಯ ಭಟ್ಟ ಉಂಚಗೇರಿ ಅವರ ನೇತೃತ್ವದಲ್ಲಿ ಪಾರಾಯಣ ಆರಂಭವಾಯಿತು. ರಾಣಾಯನೀಯ ಶಾಖೆಯು ಹೊನ್ನಾವರ ಭಾಗದಲ್ಲಿ ಮಾತ್ರ ಉಳಿದುಕೊಂಡಿದ್ದು, ಅದರ ಸಂರಕ್ಷಣೆಗೆ ಶ್ರೀಮಠದ ಮಾರ್ಗದರ್ಶನದಲ್ಲಿ ಹಲವು ಕಾರ್ಯಗಳು ನಡೆದಿವೆ.
