Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ಹಾಗೂ ಅವರ ಸೇವೆಗೆ ಪ್ರೋತ್ಸಾಹ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಶಿರಸಿ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಹಿಳಾ ಹಾಲು ಉತ್ಪಾದಕ ರೈತರಿಗಾಗಿ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿದರು.

Banner Ad

ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಮಹಿಳೆಯರ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಅರಣ್ಯ ಇಲಾಖೆಯಲ್ಲಿ ತಾನು ಸೇವೆ ಸಲ್ಲಿಸುವಂತಾಗಲು ತನ್ನ ತಾಯಿಯ ಪಾತ್ರ ಮಹತ್ವದ್ದಾಗಿದೆ. ತಾಯಿಯ ಕಠಿಣ ಪರಿಶ್ರಮದಿಂದಲೇ ಇಂದು ಗೌರವಾನ್ವಿತ ಸ್ಥಾನದಲ್ಲಿದ್ದೇನೆ ಎಂದರು.

ಡಾ. ಸುಮನ್ ಹೆಗಡೆ ಮಾತನಾಡಿ, ಮಗುವಿಗೆ ಮೊದಲ ಗುರು ತಾಯಿ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಪುಸ್ತಕ ಓದುವ ಹವ್ಯಾಸ ಬೆಳೆಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ಮಕ್ಕಳ ಆರೋಗ್ಯದ ಜೊತೆಗೆ ಮಹಿಳೆಯರೂ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಿತ ಆಹಾರ ಸೇವನೆ ಹಾಗೂ ವ್ಯಾಯಾಮದ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾಗ್ಯಾ ಹೆಗಡೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯಂತ ಪೂಜನೀಯ ಸ್ಥಾನವಿದೆ. ನದಿಯನ್ನು ತಾಯಿ, ಭೂಮಿಯನ್ನು ಪೃಥ್ವಿ ಹಾಗೂ ಮರಗಳಲ್ಲಿ ದೇವತೆಯನ್ನು ಕಾಣುವ ಶ್ರೀಮಂತ ಸಂಸ್ಕೃತಿ ನಮ್ಮದು. ಮಹಿಳೆಯರಿಗೆ ಗೌರವ ದೊರೆಯುವಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಅರಿಶಿಣ ಕುಂಕುಮವು ಮಂಗಲದ ಪವಿತ್ರ ಸಂಕೇತವಾಗಿದ್ದು, ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು. ಹೈನುಗಾರಿಕಾ ಸಾಧಕಿ ವೇದಾ ಸೀತಾರಾಮ ಹೆಗಡೆ ನೀರ್ನಳ್ಳಿ ಮಾತನಾಡಿ, ಮಹಿಳೆಯರನ್ನು ಸಹೋದರಿಯರಂತೆ ಪರಿಗಣಿಸಿ ಇಂತಹ ವಿನೂತನ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತಸ ತಂದಿದೆ. ಬಿಡುವಿಲ್ಲದ ದಿನನಿತ್ಯದ ಕೆಲಸದ ನಡುವೆಯೂ ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತೋಷದ ಸಂಗತಿ ಎಂದರು.

 

ಕಾರ್ಯಕ್ರಮದ ಪ್ರಾಸ್ತಾವಿಕದಲ್ಲಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿ ಹಾಗೂ ಸಹೋದರಿಯರ ಪ್ರೀತಿ-ಮಮತೆಯಲ್ಲಿ ಬೆಳೆದಿರುವುದರಿಂದ ಮಾತೆಯರ ಬಗೆಗಿನ ತಮ್ಮ ಭಾವನೆ ಶಾಶ್ವತವಾಗಿದೆ. ಹಾಲು ಸಂಘಗಳ ವ್ಯವಹಾರ ಹಾಗೂ ಇತರ ಚರ್ಚೆಗಳಿಗಾಗಿ ಮಾತ್ರ ಮಹಿಳೆಯರನ್ನು ನೆನಪಿಸಿಕೊಳ್ಳದೆ, ಅವರ ನಿಸ್ವಾರ್ಥ ಸೇವೆಗೆ ಅರ್ಥಪೂರ್ಣ ಗೌರವ ಸಲ್ಲಿಸುವ ಉದ್ದೇಶದಿಂದ ಅರಿಶಿಣ ಕುಂಕುಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಚಂದನಾ ಹೆಗಡೆ ಸ್ವಾಗತಿಸಿದರು. ಜವಳಗುಂಡಿ ಹಾಲು ಉತ್ಪಾದಕರ ಮಹಿಳಾ ಸಂಘದ ಲೀಲಾ ಶೆಟ್ಟಿ ನಿರೂಪಿಸಿದರು. ಸುರೇಶ್ಚಂದ್ರ ಹೆಗಡೆ ವಂದಿಸಿದರು. ಶಿರಸಿ ತಾಲೂಕಿನ ವಿವಿಧ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Banner Ad