ಸುದ್ದಿ ಕನ್ನಡ ವಾರ್ತೆ
ದಾಂಡೇಲಿ : ತಾಲೂಕಿನ ಅಂಬಿಕಾ ನಗರದಿಂದ ಸಂಬಂಧಿಕರ ಮನೆಯಾದ ಜನತಾ ಕಾಲೋನಿಗೆ ಬರುತ್ತಿದ್ದಾಗ ಹಠಾತ್ತನೆ ಓಡಿ ಬಂದ ಎಮ್ಮೆಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ, ದ್ವಿಚಕ್ರ ವಾಹನದ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಕುಳಗಿಯಲ್ಲಿ ನಡೆದಿದೆ. ಅಂಬಿಕಾನಗರದ ಅಂಚೆ ಇಲಾಖೆಯ ಉದ್ಯೋಗಿ ಹಾಗೂ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ನಿವಾಸಿಯಾಗಿರುವ ಉಮೇಶ ಭಟ್ (ವ.59) ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇವರು ಕರ್ತವ್ಯ ಮುಗಿಸಿ ಅಂಬಿಕಾನಗರದಿಂದ ಜನತಾ ಕಾಲೋನಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗುತ್ತಿರುವಾಗ
ಕುಳಗಿಯ ಕನ್ನಡ ಶಾಲೆಯ ಹತ್ತಿರ ಏಕಾಏಕಿ ಎಮ್ಮೆಯೊಂದು ಓಡಿಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಉಮೇಶ ಭಟ್ ಅವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್.ಡಿ. ಎಂ ಆಸ್ಪತ್ರೆಗೆ ರವಾನಿಸಲಾಗಿತ್ತು. ಎಸ್.ಡಿ. ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 2027ರ ಏಪ್ರಿಲ್ ತಿಂಗಳಲ್ಲಿ ನಿವೃತ್ತರಾಗಬೇಕಾಗಿದ್ದ ಉಮೇಶ ಭಟ್ ಅವರು ಆಕಸ್ಮಿಕವಾಗಿ ರಸ್ತೆ ಅವಘಡದಿಂದ ಸಾವನ್ನಪ್ಪಿದ್ದಾರೆ.
