Banner Ad

ಸುದ್ದಿ ಕನ್ನಡ

ಕಾರವಾರ:ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

Banner Ad

​ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ರಸ್ತೆಗಾವಲು ಕರ್ತವ್ಯದಲ್ಲಿದ್ದ ಸಿಬ್ಬಂದಿ ವಾಹನ ತಪಾಸಣೆ ನಡೆಸಿದ ವೇಳೆ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ಪರವಾನಗಿ ಇಲ್ಲದೆ ವಿವಿಧ ಬ್ರಾಂಡ್‌ನ 1,296 ಲೀಟರ್ (150 ಬಾಕ್ಸ್) ಮದ್ಯವನ್ನು ಮಂಗಳೂರು ಕಡೆಗೆ ಸಾಗಾಟ ಮಾಡಲಾಗುತ್ತಿರುವುದು ಪತ್ತೆಯಾಗಿದೆ.
​ಈ ಪ್ರಕರಣದಲ್ಲಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರಿಯಾ ಗ್ರಾಮದ ಮನ್ಸೂರ್ ಮುಹಮ್ಮದ್ (32) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಲಾದ ಮದ್ಯದ ಮೌಲ್ಯ ಸುಮಾರು ₹9 ಲಕ್ಷವಾಗಿದ್ದು, ವಾಹನದ ಮೌಲ್ಯ ಸುಮಾರು ₹8 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟು ₹17 ಲಕ್ಷ ಮೌಲ್ಯದ ಸೊತ್ತನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.

​ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗದ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರು, ಉತ್ತರ ಕನ್ನಡ ಜಿಲ್ಲೆ ಕಾರವಾರ ಮತ್ತು ಅಬಕಾರಿ ಉಪ ಅಧೀಕ್ಷಕರು, ಕಾರವಾರ ಉಪ ವಿಭಾಗದ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

​ಆರೋಪಿಯನ್ನು ವಶಕ್ಕೆ ಪಡೆದು, ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಕರ್ನಾಟಕ ಅಬಕಾರಿ ಕಾಯ್ದೆ-1965ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

Banner Ad