ಸುದ್ದಿ ಕನ್ನಡ ವಾರ್ತೆ
ಕಾರವಾರ: ಹಿಂದೂ ಧರ್ಮ ಶ್ರೇಷ್ಠವಾದದ್ದು. ಧರ್ಮದ ಆಚರಣೆಯಿಂದ ಶ್ರೇಯಸ್ಸು ಆಗಲಿದೆ. ಈ ಧರ್ಮ ಜಗತ್ತಿಗೆ ಆಧಾರವಾಗಿದೆ. ಎಲ್ಲರೂ ಬಯಸುವುದು ಸುಖ.ನಾಸ್ತಿಕ ಆಸ್ತಿಕ ಇಬ್ಬರೂ ಬಯಸುವುದು ಸುಖ. ಆದರೆ ಮಾರ್ಗ ಬೇರೆ ಬೇರೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಶ್ರೀಗಳು ನುಡಿದರು.
ಧರ್ಮ ವಿಜಯ ಯಾತ್ರೆಯ ಅಂಗವಾಗಿ ಕಾರವಾರಕ್ಕೆ ಆಗಮಿಸಿರುವ ಶ್ರೀಗಳು ಬುಧವಾರ ಸಂಜೆ ಕಾರವಾರದ ಮಾಲಾದೇವಿ ಮೈದಾನದಲ್ಲಿ ಗುರುವಂದನೆ ಸ್ವೀಕರಿಸಿ ಆಶಿರ್ವಚನ ನೀಡಿ ಮಾತನಾಡುತ್ತಿದ್ದರು.
ಧರ್ಮ ಹಾಗೂ ಕರ್ತವ್ಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಶ್ರೀಗಳು ಲೌಕಿಕ ಕೆಲಸದಿಂದ ತಾತ್ಕಾಲಿಕ ಸುಖ ಸಿಗುತ್ತದೆ. ಅದರ ಹಿಂದೆಯೂ ಧರ್ಮ ಇದೆ. ಧರ್ಮ ಇಲ್ಲದಿದ್ದರೆ ಕಷ್ಟ ಪಟ್ಟರೂ ಫಲ ಸಿಗದು. ಧರ್ಮ ಕಣ್ಣಿಗೆ ಕಾಣದೆ ಪ್ರಪಂಚವನ್ನು ನಡೆಸುತ್ತಿದೆ ಎಂದು ಹೇಳಿದರು.
ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ. ಸುಖವನ್ನು ಕೊಡುವುದು ಧರ್ಮಎಂದು ಹೇಳಿದರು.
ಶಂಕರಾಚಾರ್ಯರ ಪರಂಪರೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಶ್ರೀಗಳು ಹಿಂದೂ ಧರ್ಮದ ಪರಂಪರೆ ಹಾಗೂ ಶ್ರೇಷ್ಠತೆಯ ಬಗ್ಗೆ ಹೇಳಿದರಲ್ಲದೇ ನಮ್ಮ ಧರ್ಮವು ಮಾತ್ರ ಧರ್ಮ, ಉಳಿದಿದ್ದೆಲ್ಲ ಮತಗಳು ಎಂದು ಹೇಳಿದರು.
ಈ ಜಗತ್ತಿಗೆ ಧರ್ಮ ಆಧಾರ. ಇದು ಸನಾತನ ಧರ್ಮ. ಅನಾದಿಕಾಲದಿಂದ ಬಂದಿದೆ. ಇದು ವಾಸ್ತವಿಕ ವಿಚಾರ. ಆರಂಭ ಗೊತ್ತಿಲ್ಲ. ಒಬ್ಬ ವ್ಯಕ್ತಿಯ ಮತಿಯಿಂದ ಬಂದಿದ್ದು ಮತ. ಇಂದು ಬೇಕಾದರೂ ಯಾರೂ ಮತ ಸೃಷ್ಟಿ ಮಾಡಬಹುದು. ಆದರೆ ಧರ್ಮವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಶ್ರೀಗಳು ಹೇಳಿದರು.
ಧರ್ಮದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ ಶ್ರೀಗಳು ಯಾರೇ ಆಕ್ಷೇಪಿಸಿದರೂ ಧರ್ಮ ಬದಲಾಗದು. ಈ ಧರ್ಮಕ್ಕೆ ತೊಂದರೆಯಾದರೆ ಪ್ರಪಂಚಕ್ಕೆ ತೊಂದರೆ. ಸನಾತನ ಹಿಂದು ಎನ್ನುವುದು ಧರ್ಮ ಎಂದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ. ಜಿ. ಉಮಾ ಮಾತನಾಡಿ ಶಂಕರ ಭಗವತ್ಪಾದರು ನಮಗೆ ಪ್ರಾತಃ ಸ್ಮರಣೀಯರು. ಸನಾತನದ ಧರ್ಮದ ಸ್ಥಾಪನೆಗಾಗಿ ದೇಶಾದ್ಯಂತ ಸಂಚರಿಸಿದರು. ಶಂಕರರು ಹಾಗೂ ಮಂಡನಮಿಶ್ರ ಅವರ ನಡುವೆ ವಾದಕ್ಕೆ ಉಭಯಭಾರತಿ ನ್ಯಾಯಾಧೀಶರಾಗಿದ್ದರು. ಅಂದರೆ ಎಂಟನೇ ಶತಮಾನದಲ್ಲಿ ಸ್ತ್ರೀಯರಿಗೆ ಪ್ರಾತಿನಿಧ್ಯ ಇತ್ತು. ನಮ್ಮ ಸಮಾಜ ಒಗ್ಗೂಡಬೇಕಾಗಿದೆ. ಮಹಾರಾಷ್ಟ್ರದ ಐಟಿ ಕಂಪನಿಯಲ್ಲಿ ನಡೆದ ದೌರ್ಜನ್ಯ ಕೇಳಿದಾಗ ರಕ್ತ ಕುದಿಯುತ್ತದೆ. ಇದು ಬಹುಸಂಖ್ಯಾತರಾದ ನಮ್ಮ ದೌರ್ಬಲ್ಯ. ನಮ್ಮ ಸಂಸ್ಕೃತಿ ಬಗ್ಗೆ ಅರಿವು ನೀಡಬೇಕಾಗಿದೆ. ಸಮಾಜ ಒಂದಾಗಿ ಒಗ್ಗಟ್ಟಿನಿಂದ ಇರುವ ಸಂದರ್ಭ ಈಗ ಎದುರಾಗಿದೆ. ಸಂಸ್ಕೃತಿ ಉಳಿಯಲು ಮಾತೆಯರೇ ಕಾರಣ. ನಮ್ಮ ಮಕ್ಕಳನ್ನು ಸದೃಢವಾಗಿ ಬೆಳೆಸೋಣ ಎಂದರು.
ರಾಮಕೃಷ್ಣ ಆಶ್ರಮದ ಭವೇಶಾನಂದ ಶ್ರೀಗಳು ಶಂಕರರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕುಟುಂಬದ ಜೊತೆ ಗುರು ಕಾಣಿಕೆ ಅರ್ಪಿಸಿದರು. ನಾಟ್ಯಶಾರದೆ ಮೂರ್ತಿ, ಬೆಳ್ಳಿ ಅಭಿನಂದನಾ ಪತ್ರ ನೀಡಿದರು. ಶಿವಮೂರ್ತಿ ಜೋಯಿಸ್ ಅಭಿನಂದನಾಪತ್ರ ವಾಚಿಸಿದರು. ರವಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಪುಷ್ಪ ಗುರುಕುಲ ವಿದ್ಯಾರ್ಥಿಗಳಿಂದ ವೇದಘೋಷ, ಪದ್ಮಜಾ ಜೋಯಿಸ್ ಸಂಗಡಿಗರಿಂದ ಗುರುನಾಮ ಸ್ಮರಣೆ ನಡೆಯಿತು. ಪರ್ಬತ್ ದಂಪತಿ ದೂಳಿ ಪಾದ ಪೂಜೆ ನೆರವೇರಿಸಿದರು.ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕರಾದ ರೂಪಾಲಿ ನಾಯ್ಕ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸುಮಂಗಲಿಯರು ಪೂರ್ಣಕುಂಭದೊಂದಿಗೆ ಸ್ವಾಮಿಗಳನ್ನು ಸ್ವಾಗತಿಸಿದರಲ್ಲದೇ ಭವ್ಯ ಮೆರವಣಿಗೆಯಲ್ಲಿ ಶ್ರೀಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು.ಉತ್ತರಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾರವಾರಕ್ಕೆ ಆಗಮಿಸಿ ಶ್ರೀಗಳ ಆಶಿರ್ವಾದ ಪಡೆದರು.
