ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ದೀರ್ಘಕಾಲದ ಬೇಡಿಕೆಗಳು ಈಡೇರುತ್ತಿದ್ದು,ಅದರಂತೆ ಜೂನ್ 20ರಂದು ಮಧ್ಯಾಹ್ನ 2:00ಕ್ಕೆ ಕುಮಟಾ ರೈಲ್ವೆ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ರೈಲು ವಿಸ್ತರಣಾ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದ ಫಲವಾಗಿ ಮಂಜೂರಾಗಿರುವ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆಯನ್ನು ಸಂಸದರು ನೆರವೇರಿಸಲಿದ್ದಾರೆ.
ಜಿಲ್ಲೆಯ ಸಾರ್ವಜನಿಕರು, ಪ್ರವಾಸಿಗರು ಹಾಗೂ ಪ್ರಮುಖವಾಗಿ ತಿರುಪತಿಗೆ ಪ್ರಯಾಣಿಸುವ ಭಕ್ತಾದಿಗಳಿಗೆ ಅತ್ಯಂತ ಅನುಕೂಲಕರವಾಗುವಂತೆ, ಈ ಹಿಂದೆ ಕಾಚಿಗುಡ-ಮುರುಡೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12790 ಮತ್ತು 12789 ಅನ್ನು ಇದೀಗ ಮುರುಡೇಶ್ವರದಿಂದ ಕುಮಟಾದವರೆಗೆ ಅಧಿಕೃತವಾಗಿ ವಿಸ್ತರಿಸಲಾಗುತ್ತಿದೆ. ಸಂಸದರ ಪ್ರಯತ್ನದಿಂದಾಗಿ ಸಾಕಾರಗೊಂಡಿರುವ ಈ ವಿಸ್ತರಿತ ರೈಲು ಸೇವೆಗೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ.
ಕುಮಟಾ ಮಾತ್ರವಲ್ಲದೇ ಮುರುಡೇಶ್ವರ, ಗೋಕರ್ಣ ಮತ್ತು ಭಟ್ಕಳ ರೈಲ್ವೆ ನಿಲ್ದಾಣಗಳಲ್ಲಿಯೂ ಸಹ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಈ ಎಲ್ಲ ಕಾಮಗಾರಿಗಳನ್ನು ಅಂದು ಕುಮಟಾ ನಿಲ್ದಾಣದಿಂದಲೇ ಜಂಟಿಯಾಗಿ ಲೋಕಾರ್ಪಣೆಗೊಳಿಸಲಾಗುವುದು.
ಈ ಮಹತ್ವದ ಅಭಿವೃದ್ಧಿ ಕಾರ್ಯಕ್ರಮ ಹಾಗೂ ರೈಲು ವಿಸ್ತರಣೆಯ ಸಮಾರಂಭದಲ್ಲಿ ಕುಮಟಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ದಿನಕರ್ ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ. ಅವರೊಂದಿಗೆ ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಕುಮಾರ್ ಝಾ, ಕೊಂಕಣ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕರು, ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ಸ್ಥಳೀಯ ಆಡಳಿತದ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಎಂದು ಸಂಸದರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ
