ಸುದ್ದಿ ಕನ್ನಡ ವಾರ್ತೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ,ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾರಿ ತಲ್ಲಣ ಸೃಷ್ಟಿಸಿರುವ, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಅಕ್ರಮ ನಾಡಬಂದೂಕು ತಯಾರಿಕೆ ಮತ್ತು ಮಾರಾಟ ಜಾಲವನ್ನು ಬೆಳಗಾವಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಇಡೀ ಜಾಲದ ಮೇಲೆ ದಾಳಿ ನಡೆಸಿರುವ ಪೊಲೀಸರು ಪ್ರಮುಖ ಕಿಂಗ್ಪಿನ್ ಸೇರಿದಂತೆ ಬರೋಬ್ಬರಿ 13 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಇವರಿಂದ 9 ಅತ್ಯಾಧುನಿಕ ನಾಡಬಂದೂಕುಗಳು ಹಾಗೂ ಬಂದೂಕು ತಯಾರಿಕೆಗೆ ಬಳಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾನಾಪುರ ತಾಲೂಕಿನ ಕಟಗಲಿ ಹಳ್ಳಿ ಈ ಇಡೀ ಕರಾಳ ದಂಧೆಯ ಅಸಲಿ ಕೇಂದ್ರಸ್ಥಾನವಾಗಿತ್ತು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆಈ ಅಕ್ರಮ ಜಾಲದ ಮುಖ್ಯ ಸೂತ್ರಧಾರ ಕಟಗಲಿ ಗ್ರಾಮದ ಮಾರುತಿ ಸುತಾರ್. ಈತ 2024 ರಿಂದಲೇ ತನ್ನ ಸ್ವಗೃಹದಲ್ಲೇ ರಹಸ್ಯವಾಗಿ ತಾಂತ್ರಿಕ ಘಟಕ ಸ್ಥಾಪಿಸಿ ನಾಡಬಂದೂಕುಗಳನ್ನು ತಯಾರಿಸುತ್ತಿದ್ದ. ಸಿಂಗಲ್ ಲೋಡೆಡ್ ಹಾಗೂ ಡಬಲ್ ಲೋಡೆಡ್ ಬಂದೂಕುಗಳನ್ನು ತಯಾರಿಸುವುದರಲ್ಲಿ ಈತ ನಿಷ್ಣಾತನಾಗಿದ್ದ. ಪೊಲೀಸರು ಈತನ ಮನೆ ಮೇಲೆ ದಾಳಿ ಮಾಡಿದಾಗ ಒಂದು ಪಿಸ್ತೂಲ್ ಪತ್ತೆಯಾಗಿದ್ದು, ಆತ ಈಗಾಗಲೇ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಗಿರಾಕಿಗಳಿಗೆ ಮಾರಾಟ ಮಾಡಿದ್ದ ಇನ್ನು 8 ಪಿಸ್ತೂಲ್ಗಳನ್ನು ಪೊಲೀಸರು ವಿವಿಧೆಡೆ ದಾಳಿ ನಡೆಸಿ ರಿಕವರಿ ಮಾಡಿದ್ದಾರೆ.
ಖಾನಾಪುರ ತಾಲೂಕಿನಲ್ಲಿ 2024 ರಲ್ಲಿ ನಡೆದಿದ್ದ ಒಂದು ಭೀಕರ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಪೊಲೀಸರಿಗೆ, ಕೊಲೆಗೆ ಬಳಸಲಾದ ಮಾರಕಾಸ್ತ್ರದ ಮೂಲವನ್ನು ಹುಡುಕುತ್ತಾ ಹೋದಾಗ ಈ ಬೃಹತ್ ಗನ್ ನೆಟ್ವರ್ಕ್ನ ಸುಳಿವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿ ಸುತಾರ್, ಸೋಮನಾಥ್ ಚೌಗಲೆ, ಸಂತೋಷ್ ನಾಯ್ಕ್, ಮಾರುತಿ ಗುಡದಾಗೋಳ್, ಬಾಲು ನಾಯ್ಕ್, ಲಕ್ಷ್ಮಣ್ ಗುಜನಾಳ್, ಬಸವರಾಜ ಸಾಲೋಟಗಿ, ಬಸವಂತ ಯರಮಲ್ಕರ್ ಮತ್ತು ಲಕ್ಷ್ಮಣ್ ಗುರವ್ ಸೇರಿದಂತೆ 13 ಜನರನ್ನು ಸದ್ಯ ಜೈಲಿಗಟ್ಟಲಾಗಿದೆ.
ಈ ಅಕ್ರಮ ದಂಧೆಗೆ ಮರಿಯಪ್ಪ ನಾಯ್ಕ್ ಎಂಬಾತ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ. ಇನ್ನು ಇವರಿಗೆ ಗನ್ ಬಿಡಿಭಾಗಗಳನ್ನು ಸಪ್ಲೈ ಮಾಡುತ್ತಿದ್ದವನು ವಿಶ್ವನಾಥ್ ದೇಸಾಯಿ. ಈತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಕೇವಲ ಹೆಸರಿಗೊಂದು ಬುಕ್ ಸ್ಟಾಲ್ ಇಟ್ಟುಕೊಂಡು, ಅದರ ಮರೆಯಲ್ಲಿ ಬಂದೂಕಿನ ಟ್ರಿಗರ್ ಹಾಗೂ ಸ್ಫೋಟಕಗಳನ್ನು ಮಾರಾಟ ಮಾಡುತ್ತಿದ್ದ
ಪೊಲೀಸರು ಈತನಿಂದ 21 ಗನ್ ಟ್ರಿಗರ್ಗಳು, 5 ಹೆಡ್ಸ್, 15 ಗನ್ ನಿಪ್ಪಲ್ಸ್, 34 ಪ್ಯಾಕೆಟ್ ಗನ್ಪೌಡರ್ , 499 ಸೀಸದ ಪೆಲೆಟ್ಗಳು , 420 ಕ್ಯಾಪ್ಸ್ ಹಾಗೂ 48 ಸಜೀವ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಈ ಕಥೆಯ ಅತಿ ದೊಡ್ಡ ಟ್ವಿಸ್ಟ್ ಎಂದರೆ, ಬಂದೂಕು ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಬೆಳಗಾವಿಯ ಪ್ರಸಿದ್ಧ ಖಂಜಾರ್ ಗಲ್ಲಿ ಪ್ರದೇಶದಿಂದ ತರಲಾಗುತ್ತಿತ್ತು. 2021 ರಲ್ಲೇ ಅಧಿಕೃತವಾಗಿ ವ್ಯವಹಾರ ಸ್ಥಗಿತಗೊಳಿಸಿದ್ದ ಗನ್ ಶಾಪ್ ಮಾಲೀಕ ವಿಜಯ್ ಅಂಗೋಲ್ಕರ್ ಎಂಬಾತ, ಕಾನೂನುಬಾಹಿರವಾಗಿ ಬಿಡಿಭಾಗಗಳನ್ನು ವಿಶ್ವನಾಥ್ ದೇಸಾಯಿಗೆ ಮಾರುತ್ತಿದ್ದ. ದೇಸಾಯಿ ಅದನ್ನು ಮುಖ್ಯ ಆರೋಪಿ ಮಾರುತಿ ಸುತಾರ್ಗೆ ತಲುಪಿಸುತ್ತಿದ್ದ. ಸದ್ಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕಂಪ್ಲೀಟ್ ಎಫ್ಐಆರ್ ದಾಖಲಾಗಿದ್ದು, ರಾಜ್ಯದ ಇನ್ನು ಎಲ್ಲೆಲ್ಲಿ ಈ ಮಾರಕಾಸ್ತ್ರಗಳು ಸಪ್ಲೈ ಆಗಿವೆ ಎಂಬ ತೀವ್ರ ವಿಚಾರಣೆ ನಡೆಯುತ್ತಿದೆ.
