ಸುದ್ದಿ ಕನ್ನಡ ವಾರ್ತೆ
​ಜೋಯಿಡಾ: ತಾಲೂಕು ಕೇಂದ್ರದ ಜೋಯಿಡಾ ನ್ಯಾಯಬೆಲೆ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಪಡಿತರ ವಿತರಣೆ ವಿಳಂಬವಾಗಿದ್ದು, ದೂರದ ಗ್ರಾಮಗಳಿಂದ ಆಗಮಿಸಿದ ಪಡಿತರದಾರರು ತೀವ್ರ ಪರದಾಡುವಂತಾಗಿದೆ.

​ಜೋಯಿಡಾ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ವಾಗೇಲಿ, ಕಾರ್ಟೋಳಿ, ಬುಳಬುಳೆ, ಖಾನಗಾಂವ, ಚಾಪೋಲಿ ಕಾಳಸಾಯಿ, ಅಮೃತಪಾಲಿ, ಗಾವಡೇವಾಡಾ ಸೇರಿದಂತೆ ಹತ್ತಾರು ಗ್ರಾಮಗಳು ಸೇರಿವೆ. ಈ ಗ್ರಾಮಗಳ ಬಹುತೇಕ ನಿವಾಸಿಗಳು ನ್ಯಾಯಬೆಲೆ ಅಂಗಡಿಯಿಂದ 20 ರಿಂದ 35 ಕಿಲೋಮೀಟರ್ ದೂರದಲ್ಲಿದ್ದು, ಪಡಿತರ ಪಡೆಯಲು ಜೀಪ್ ಬಾಡಿಗೆ ಮಾಡಿಕೊಂಡು ಅಥವಾ ಬಸ್ ಮೂಲಕ ತಾಲೂಕು ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ 1,319 ಬಿಪಿಎಲ್, 165 ಅಂತ್ಯೋದಯ ಹಾಗೂ 375 ಎಪಿಎಲ್ ಪಡಿತರ ಚೀಟಿದಾರರು ಇದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆ ಕಾರ್ಯ ಸುಗಮವಾಗಿ ನಡೆಯದ ಕಾರಣ ಗ್ರಾಹಕರು ಮೂರು ದಿನಗಳಿಂದ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

​ವಾಗೇಲಿ, ಖಾನಗಾಂವ, ಮಾರ್ಲಿ, ಕಾರ್ಟೋಳಿ ಸೇರಿದಂತೆ ದೂರದ ಗ್ರಾಮಗಳಿಂದ ಬಂದಿರುವ ಜನರು ದೈನಂದಿನ ಕೂಲಿ ಕೆಲಸ ಬಿಟ್ಟು ನ್ಯಾಯಬೆಲೆ ಕೇಂದ್ರಕ್ಕೆ ಬರುತ್ತಿದ್ದು, ಪಡಿತರ ಸಿಗದೆ ನಿರಾಶರಾಗಿ ಹಿಂದಿರುಗುತ್ತಿದ್ದಾರೆ. ಅಲ್ಲದೆ ಪ್ರಯಾಣಕ್ಕಾಗಿ ನೂರಾರು ರೂಪಾಯಿ ವೆಚ್ಚ ಮಾಡಬೇಕಾಗಿರುವುದರಿಂದ ಆರ್ಥಿಕ ನಷ್ಟವೂ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

​ಪಡಿತರದಾರರ ಪ್ರಕಾರ, ಇಂದು ಬೆಳಿಗ್ಗೆಯಿಂದಲೇ ನ್ಯಾಯಬೆಲೆ ಕೇಂದ್ರದ ಎದುರು ಸರದಿ ಸಾಲಿನಲ್ಲಿ ನಿಂತು ತಮ್ಮ ನಂಬರ್ ದಾಖಲಿಸಿಕೊಂಡಿದ್ದಾರೆ. ಪಡಿತರ ಬೇಗ ಸಿಗಲೆಂಬ ನಿರೀಕ್ಷೆಯಲ್ಲಿ ಮುಂಜಾನೆಯಿಂದಲೇ ಸಾಲಿನಲ್ಲಿ ಕಾಯುತ್ತಿದ್ದರೂ, ಸರ್ವರ್ ಸಮಸ್ಯೆಯಿಂದ ವಿತರಣೆ ವಿಳಂಬವಾಗಿದ್ದು ಸಾರ್ವಜನಿಕರು ಗಂಟೆಗಟ್ಟಲೆ ಪರದಾಡುವಂತಾಗಿದೆ. ದೂರದ ಗ್ರಾಮಗಳಿಂದ ಬಂದಿರುವ ಅನೇಕರು ದಿನಪೂರ್ತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.