ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ತಾಲೂಕಿನ ಬೆಳಂಬಾರ ನಿವಾಸಿ ಪರಿಸರ ಹೋರಾಟಗಾರ ಹಾಗೂ ನಾಟಿ ವೈದ್ಯ ಹನುಮಂತ ಬೊಮ್ಮುಗೌಡ ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿ ಲಭಿಸಿದೆ. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ನಿರಂತರ ಕೊಡುಗೆಗೆ ಈ ರಾಜ್ಯ ಮಟ್ಟದ ಗೌರವ ದೊರೆತಿದೆ.

ರಾಜ್ಯ ಮಟ್ಟದ ಈ ಪ್ರಶಸ್ತಿಯನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ಪ್ರದಾನ ಮಾಡುತ್ತಿದ್ದು, ಬರುವ ಮೇ 22, 2026ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ. ನಾಟಿ ವೈದ್ಯರಾಗಿ ಹೆಸರುವಾಸಿಯಾದ ಹನುಮಂತ ಬೊಮ್ಮುಗೌಡ ಅವರು ಹಲವು ವರ್ಷಗಳಿಂದ ಗ್ರಾಮೀಣ ಪರಿಸರ ಸಂರಕ್ಷಣೆ, ಸ್ಥಳೀಯ ಸಸ್ಯಸಂಪತ್ತಿನ ಉಳಿವು,ಜಲಮೂಲಗಳ ರಕ್ಷಣೆ ಹಾಗೂ ಯುವಪೀಳಿಗೆಗೆ ಜೀವವೈವಿಧ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರಂಪರೆಯ ನಾಟಿ ವೈದ್ಯಕೀಯ ಜ್ಞಾನವನ್ನು ಉಳಿಸಿ ಬೆಳೆಸುವ ಜೊತೆಗೆ ಪರಿಸರ ಚಟುವಟಿಕೆಗಳು ಮತ್ತು ಆಧಾರಿತ ಸಮುದಾಯ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕೃತಿ ಸಂರಕ್ಷಣೆಗೆ ಪ್ರೇರಣೆ ನೀಡುತ್ತಿದ್ದಾರೆ.

ಅವರ ಪರಿಶ್ರಮ, ನಿಷ್ಠೆ ಹಾಗೂ ಸಮಾಜಮುಖಿ ಕಾರ್ಯಪಟುತೆಗೆ ಈ ಗೌರವ ಸಂದಿರುವುದು ಅಂಕೋಲಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಸ್ಥಳೀಯ ನಾಗರಿಕರು, ಪರಿಸರಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳವರು ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಅವರ ಪರಿಸರ ಸಂರಕ್ಷಣಾ ಮತ್ತು ನಾಟಿ ವೈದ್ಯಕೀಯ ಸೇವೆಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದ್ದಾರೆ.