ಸುದ್ದಿ ಕನ್ನಡ ವಾರ್ತೆ
ಶಿರಸಿ :ತಾಲೂಕಿನ ಅಮ್ಮಿನಳ್ಳಿಯ ದಿನೇಶ ಎನ್ ಮಡಿವಾಳ ಸಾಹಿತ್ಯ ಕ್ಷೇತ್ರದಲ್ಲಿ ಗೈದ ದಾಖಲೆಯ ವಿಶೇಷ ಸಾಧನೆಗಾಗಿ ಪ್ರತಿಷ್ಠಿತ “ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್” ಗೌರವ ಲಭಿಸಿದೆ. ಉದಯಿಸುವ ಸೂರ್ಯನನ್ನು ಮೂಲ ವಸ್ತುವಾಗಿರಿಸಿಕೊಂಡು ಚಳಿ ಮಳೆ ಬೇಸಿಗೆ ಕಾಲಕ್ಕೆ ತಕ್ಕಂತೆ ಸೂರ್ಯೋದಯ ಸಮಯದ ನಿಸರ್ಗ ಚಿತ್ರಣವನ್ನು ವರ್ಣಿಸುತ್ತ ಈ ಒಂದೆ ವಿಷಯದ ಮೇಲೆ ಇವರು 1750 ಕವಿತೆಗಳನ್ನು ಬರೆದಿದ್ದಾರೆ. ಎಲ್ಲ ಕವಿತೆಗಳಿಂದ ಚರಣಗಳ ಸಂಖ್ಯೆ 8132 ಆಗಿದ್ದರೆ ಒಟ್ಟೂ ಸಾಲುಗಳ ಸಂಖ್ಯೆ ಸುಮಾರು 35,038 ಆಗಿದೆ. ಹಾಗೂ ಕವಿತೆಗಳಲ್ಲಿ 3327 ಬಾರಿ ಸೂರ್ಯನ ಹೆಸರುಗಳನ್ನು ವಿವಿಧ ಹೆಸರುಗಳಿಂದ ಕವಿತೆಯಲ್ಲಿ ಬಳಸಿಕೊಳ್ಳಲಾಗಿದೆ. ಈ ದಾಖಲೆಯಲ್ಲಿ ಇರುವ ಮತ್ತೊಂದು ವಿಶೇಷ ಸಂಗತಿ ಎಂದರೆ “ಸೂರ್ಯ ಸಿರಿ” ಹೆಸರಿನ ಒಂದೇ ಕವಿತೆ 77 ಚರಣಗಳಿಂದ ಕೂಡಿದ್ದು 307 ಸಾಲುಗಳನ್ನು ಹೊಂದಿದೆ. ಇದರ ಹೊರತಾಗಿ ಕನ್ನಡ ವರ್ಣಮಾಲೆಯಲ್ಲಿನ “ಅ” ದಿಂದ “ಹ” ವರೆಗಿನ 35 ಅಕ್ಷರ ಕೆಲವು ಬಳಕೆಗೆ ಸಿಗದ ಶಬ್ದ ಹೊರತುಪಡಿಸಿ ಅವುಗಳಿಗೆ ಒಂದೊಂದು ಅಕ್ಷರವನ್ನೂ ಕವಿತೆಯ ಪ್ರತೀ ಸಾಲಿನ ಮೊದಲ ಪದವಾಗಿ ಬಳಸಿಕೊಂಡು ಕಾವ್ಯ ರಚನೆ ಮಾಡಿರುವುದು ಓದುಗರಿಗೆ ವಿಶೇಷವೆನಿಸುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದು ಖ್ಯಾತ ಚಿತ್ರ ಸಾಹಿತಿ ಡಾ ಜಯಂತ ಕಾಯ್ಕಿಣಿ ಇವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದ ಚೊಚ್ಚಲ ಕವನ ಸಂಕಲನ “ಸ್ವರ್ಗ ನಿಸರ್ಗ” ಇದರಲ್ಲಿಯೂ ಇರುವ 70 ಕವಿತೆಗಳೂ ಬೆಳಗಗುವಿತೆಗಳೆ ಆಗಿವೆ. ಕಾರವಾರ, ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕವಿತೆಗಳ ವಾಚನ ಪ್ರಸಾರವಾಗಿದ್ದು ಬೆಳಗುಗವಿತೆಗಳ ಸಾಧನೆಗಾಗಿ ಕಾರವಾರ ಆಕಾಶವಾಣಿ ಕೇಂದ್ರ ಸಂದರ್ಶನವನ್ನೂ ನಡೆಸಿ ಪ್ರಸಾರ ಮಾಡಿದೆ. ಹಲವಾರು ವಿಶೇಷತೆಗಳನ್ನು ಇವರ ಸಾಹಿತ್ಯ ಒಳಗೊಂಡಿದ್ದು ಕಳೆದ ವರ್ಷ ವಿಶ್ವದರ್ಶನ ದೈನಿಕದ ವತಿಯಿಂದ ಬೆಳಗುಗವಿತೆಗಳ ಸಾಧನೆಗಾಗಿ “ಕನ್ನಡ ಸಾಹಿತ್ಯ ಭೂಷಣ ರಾಷ್ಟ್ರೀಯ ಪ್ರಶಸ್ತಿ”ಯೂ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.