ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಒಂದು ಸಂಸ್ಥೆಗೆ 75 ವರ್ಷ ತುಂಬುವುದೆಂದರೆ ಅದು ಯೌವನದಂತೆ ಬಲಿಷ್ಠವಾಗಿದೆ ಎಂದರ್ಥ.ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಎಲ್‌ಎಎಂಪಿ ಸಂಘವು ಇನ್ನು ಹೆಚ್ಚಿನ ಅಭಿವೃದ್ಧಿ ಕಂಡು ರೈತರಿಗೆ ಆಸರೆಯಾಗಲಿ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ನುಡಿದರು.

ಪಟ್ಟಣದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಂಘದ (ಎಲ್‌ಎಸ್‌ಎಂಪಿ) ವಜ್ರಮಹೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಆಸೆಗೆ ಮಿತಿ ಇರಲಿ ಹಾಗೂ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಪ್ರಸ್ತುತ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಸೇರಿದಂತೆ ನಾನಾ ಬಾಧೆಗಳು ತಗುಲಿ ಇಳುವರಿ ಕುಂಠಿತವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸಹಕಾರಿ ಸಂಘಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಕೃಷಿ ಕ್ಷೇತ್ರದ ಸವಾಲುಗಳನ್ನು ವಿವೇಚನೆಯಿಂದ ಎದುರಿಸಿ ರೈತರ ಹಿತ ಕಾಯಬೇಕು ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಸೊಸೈಟಿಯ ಭದ್ರತಾ ಕೊಠಡಿಯನ್ನು ಶ್ರೀಗಳು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ ಸೊಸೈಟಿಯು ಸುಸಜ್ಜಿತ ನೂತನ ಕಟ್ಟಡ ಹಾಗೂ ವಿವಿಧ ಸೌಲಭ್ಯಗಳನ್ನು ಹೊಂದುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಪ್ರಮುಖರಾದ ಎಲ್.ಪಿ. ಭಟ್ ಗುಂಡಕಲ್, ನಾರಾಯಣ ಭಟ್ಟ ಮೊಟ್ಟೆಗದ್ದೆ, ವೆಂಕಟ್ರಮಣ ಭಟ್ಟ ಗೇರಗದ್ದೆ, ತಿಮ್ಮಣ್ಣ ಭಟ್ಟ ಜಡ್ಡಿಗದ್ದೆ, ಕೃಷ್ಣ ಆಚಾರಿ, ವಿಶ್ವನಾಥ ಪಾಠಣಕ‌ರ್, ಗಣಪತಿ ಶೇಟ್ ಸೇರಿದಂತೆ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಸ್ವಾಗತಿಸಿದರು. ನಿರ್ದೇಶಕ ಸುಬ್ರಾಯ ಭಟ್ಟ ಕಾರ್ಯಕ್ರಮ ನಿರ್ವಹಿಸಿದರೆ, ಗೋಪಾಲಕೃಷ್ಣ ಭಟ್ಟ ವಂದಿಸಿದರು.