ಸುದ್ದಿ ಕನ್ನಡ ವಾರ್ತೆ
ಶಿರಸಿ: ನಗರದ ಅರಣ್ಯ ಮಹಾವಿದ್ಯಾಲಯದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2026ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬಸವರಾಜ ಕೆಂಪವಾಡ ರಾಷ್ಟ್ರಮಟ್ಟದಲ್ಲಿ 1ನೇ ರ್‍ಯಾಂಕ್ ಹಾಗೂ ದೀಕ್ಷಿತ್ ಎನ್. 14ನೇ ರ್‍ಯಾಂಕ್ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.

​ದೇಶಕ್ಕೇ ಮೊದಲ ಸ್ಥಾನ ಪಡೆದ ಬಸವರಾಜ ಕೆಂಪವಾಡ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಧರೆಪ್ಪ ಕೆಂಪವಾಡ ಹಾಗೂ ಲಕ್ಷ್ಮಿಬಾಯಿ ದಂಪತಿಯ ಪುತ್ರ. 2019-2023ರ ಅವಧಿಯಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದ ಇವರು, 8.705 ಓಜಿಪಿಎ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಬಸವರಾಜ, ಚೆಸ್ ಕ್ರೀಡೆಯಲ್ಲಿ ಎರಡು ಬಾರಿ ‘ಯೂನಿವರ್ಸಿಟಿ ಬ್ಲೂ’ ಗೌರವಕ್ಕೆ ಪಾತ್ರರಾಗಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.
​ಅಂತೆಯೇ, 14ನೇ ಸ್ಥಾನ ಪಡೆದ ದೀಕ್ಷಿತ್ ಎನ್. ಅವರು ತುಮಕೂರು ಜಿಲ್ಲೆಯ ಹಿರೇಹಳ್ಳಿಯ ನಾಗರಾಜು ಕೆ.ಎಸ್. ಹಾಗೂ ನಾಗರತ್ನ ದಂಪತಿಯ ಪುತ್ರ. 2016-2020ರ ಅವಧಿಯಲ್ಲಿ ಇದೇ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಇವರು, 8.338 ಓಜಿಪಿಎ ಅಂಕಗಳೊಂದಿಗೆ ಪದವಿ ಪೂರೈಸಿದ್ದರು. ಇವರು ಕಬಡ್ಡಿ ಕ್ರೀಡೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದರು.
​ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ: ವಿದ್ಯಾರ್ಥಿಗಳ ಈ ಅಮೋಘ ಸಾಧನೆಯು ಮಹಾವಿದ್ಯಾಲಯದ ಉತ್ಕೃಷ್ಟ ಬೋಧನೆ ಮತ್ತು ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಈ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ ಅವರು, ಬಸವರಾಜ ಮತ್ತು ದೀಕ್ಷಿತ್ ಅವರ ನಿರಂತರ ಪರಿಶ್ರಮ ಇಂದು ಫಲ ನೀಡಿದೆ. ಕಳೆದ ವರ್ಷ ಆಯ್ಕೆಯಾದ ಉದಯಕುಮಾರ್ ಹಾಗೂ ಈ ಹಿಂದೆ ಐಎಫ್‌ಎಸ್ ಅಧಿಕಾರಿಯಾಗಿ ನೇಮಕಗೊಂಡಿರುವಕಾಲೇಜಿನ 36 ಹಿರಿಯ ವಿದ್ಯಾರ್ಥಿಗಳ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

2010ರಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಬಾಆಲಮ್ ಅನ್ಸಾರಿ ಅವರು ರಾಷ್ಟ್ರಮಟ್ಟದಲ್ಲಿ ಪ್ರಥಮ ಬ್ಯಾಂಕ್ ಗಳಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಡೀನ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.