ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಗಡಿನಾಡ ಶಾಲೆಯಾದ ಹಳಗಾದ ಮಾಡರ್ನ್ ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆಯ ಗಮನ ಸೆಳೆದಿದೆ. ವಿಶೇಷವೆಂದರೆ, ಈ ಸಾಧನೆಯ ಹಿಂದೆ ಜೋಯಿಡಾ ತಾಲೂಕಿನ ಕುಗ್ರಾಮಗಳಿಂದ ಬಂದ ಬಡ ವಿದ್ಯಾರ್ಥಿಗಳ ಪರಿಶ್ರಮ ಅಡಗಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಈ ಕನ್ನಡ ಮಾಧ್ಯಮ ಶಾಲೆಗೆ ಸ್ಥಳೀಯ ವಿದ್ಯಾರ್ಥಿಗಳ ಕೊರತೆಯಿದ್ದರೂ, ಜೋಯಿಡಾದ ಗುಡ್ಡಗಾಡು ಪ್ರದೇಶದ ಪ್ರತಿಭೆಗಳಿಗೆ ಆಸರೆಯಾಗಿದೆ. ಇಲ್ಲಿನ ವಸತಿ ನಿಲಯಗಳಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡಿದ ಒಟ್ಟು 30 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪ್ರಮುಖ ವಿದ್ಯಾರ್ಥಿಗಳು-ಶಾಯೀಶ ದೇಸಾಯಿ ಶೇ. 89.92, ಕಿಶನ್ ನಾಯ್ಕ ಶೇ. 86.88, ರೋಹಿತ್ ದೇವಳಿ ಶೇ. 85.76, ನೀರಜ ಬಿರಂಗತ ಶೇ. 83.52 ಹಾಗೂ ರೋಹಿತ ನಾಯ್ಕ ಶೇ. 83.04 ಅಂಕಗಳನ್ನು ಪಡೆದಿದ್ದಾರೆ.
ಕುಗ್ರಾಮಗಳಿಂದ ಬಂದು.ಕಷ್ಟದ ಪರಿಸ್ಥಿತಿಯಲ್ಲೂ ವಸತಿ ನಿಲಯದ ಸೌಲಭ್ಯವನ್ನು ಬಳಸಿಕೊಂಡು ಈ ವಿದ್ಯಾರ್ಥಿಗಳು ತೋರಿದ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಗಳು ಸರಿಯಾದ ಪ್ರೋತ್ಸಾಹ ಸಿಕ್ಕರೆ ನಗರ ಪ್ರದೇಶದ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಈ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.
