ಸುದ್ದಿ ಕನ್ನಡ ವಾರ್ತೆ
ಕಾರವಾರ: ಕಳೆದು ಹೋಗಿರುವ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ (Central Equipment Identity Register) ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸರು, ಕಳೆದ ಆರು ತಿಂಗಳಲ್ಲಿ ಒಟ್ಟು 157 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಾದ್ಯಂತ ಕಳೆದುಹೋದ ಮೊಬೈಲ್‌ಗಳ ಪತ್ತೆಗಾಗಿ 2025 ರ ಅ.1 ರಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ವರದಿಯಾದ ಒಟ್ಟು 682 ಮಿಸ್ಸಿಂಗ್ ಪ್ರಕರಣಗಳ ಪೈಕಿ 157 ಫೋನ್‌ಗಳನ್ನು ವಶಪಡಿಸಿಕೊಂಡು ಅಸಲಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಉಳಿದ 525 ಮೊಬೈಲ್‌ಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕುಮಟಾ ಠಾಣೆ 20. ದಾಂಡೇಲಿ ನಗರ 17, ಭಟ್ಕಳ ನಗರ ಠಾಣೆ 15, ಬನವಾಸಿ ಠಾಣೆ 15, ಕಾರವಾರ ನಗರ ಠಾಣೆ 10, ಮುರುಡೇಶ್ವರ ಠಾಣೆ 08, ಅಂಕೋಲಾ & ಜೋಯಿಡಾ ಠಾಣೆ ತಲಾ 07, ಹಳಿಯಾಳ & ಮಂಕಿ ಠಾಣೆ ತಲಾ 06 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಇತರ ಠಾಣೆಗಳಾದ ಅಂಬಿಕಾನಗರ, ಗೋಕರ್ಣ, ಹೊನ್ನಾವರ, ಶಿರಸಿ, ಸಿದ್ದಾಪುರ ಮುಂತಾದೆಡೆಯೂ ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ.
ಮೊಬೈಲ್ ಕಳೆದುಹೋದ ತಕ್ಷಣ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ, ಸಿಇಐಆರ್ ಪೋರ್ಟಲ್‌ನಲ್ಲಿ ಮಾಹಿತಿಯನ್ನು ನೋಂದಾಯಿಸಬೇಕು. ಇದರಿಂದ ಐಎಂಇಐ ಸಂಖ್ಯೆಯನ್ನು ಬ್ಲಾಕ್ ಮಾಡಲು ಮತ್ತು ಫೋನ್ ಎಲ್ಲಿದೆ ಎಂಬುದನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇಲಾಖೆ ಅಭಿನಂದಿಸಿದೆ.
