ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಆನಗೋಡಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ನವೀಕರಣ ಹಾಗೂ ಅಷ್ಟಬಂಧ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಬುಧವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ಚಾಲನೆ ನೀಡಲಾಯಿತು.

​ವಿದ್ವಾನ್ ಗಣಪತಿ ಭಟ್ಟ ಹಿರೇ ಗೋಕರ್ಣ ಅವರ ಮಾರ್ಗದರ್ಶನ ಹಾಗೂ ವೇದಮೂರ್ತಿ ಗಣಪತಿ ಭಟ್ಟ ಕೊರಗಿ ಅವರ ಪೌರೋಹಿತ್ಯದಲ್ಲಿ ಮೊದಲ ದಿನದ ಧಾರ್ಮಿಕ ವಿಧಿಗಳು ಜರುಗಿದವು. ಬೆಳಿಗ್ಗೆ ಗಣಪತಿ ಪೂಜೆ, ಮಹಾ ಸಂಕಲ್ಪದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬ್ರಹ್ಮಕೂರ್ಚ ಹವನ, ನಾಂದಿ-ಪುಣ್ಯಾಹ, ಕೌತುಕಪೂಜೆ, ಋತ್ವಿಗ್ವರಣ ಮತ್ತು ಮಧುಪರ್ಕ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಕೌತುಕಬಂಧನ, ಅಷ್ಟಮೂರ್ತಿ ಪ್ರಾರ್ಥನೆ, ಬಿಂಬಶುದ್ಧಿ ಹಾಗೂ ಜಲಾಧಿವಾಸ ಗಣಹವನಗಳು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡವು.
​ಸಾಯಂಕಾಲ ಯಾಗಶಾಲಾ ಪ್ರವೇಶದೊಂದಿಗೆ ಸಪ್ತಶುದ್ಧಿ, ಪ್ರಸಾದ ಶುದ್ಧಿ, ಮಂಟಪ ಸಂಸ್ಕಾರ ಹಾಗೂ ಮಂಡಲ ದರ್ಶನ ಕಾರ್ಯಕ್ರಮಗಳು ನಡೆದವು. ವಾಸ್ತು ಶಾಂತಿ, ಅಧಿವಾಸನ ಉದಕ ಶಾಂತಿ ಹಾಗೂ ವಾಸ್ತುಬಲಿ ಪ್ರಕ್ರಿಯೆಗಳ ಮೂಲಕ ಕ್ಷೇತ್ರದ ಪವಿತ್ರತೆಯನ್ನು ಹೆಚ್ಚಿಸುವ ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು.

​ಚೈತ್ರಕೃಷ್ಣ ಸಪ್ತಮಿ ಗುರುವಾರದಂದು ಎರಡನೇ ದಿನದ ಪೂಜೆಗಳು ಮುಂದುವರಿಯಲಿವೆ. ಬೆಳಿಗ್ಗೆ ಪುಣ್ಯಾಹ, ಕಲಶ ಸ್ಥಾಪನೆ, ಅಗ್ನಿಜನನ, ಅಗ್ನಿಸಂಸ್ಕಾರ ಹಾಗೂ ಸ್ಥಾನ ಶುದ್ಧಿ ಹವನಗಳು ನಡೆಯಲಿವೆ. ಜೊತೆಗೆ ಪೂಜಾಹವನ, ನವಗ್ರಹ ಶಾಂತಿ, ಪ್ರಾಯಶ್ಚಿತ್ತ ಹವನ ಹಾಗೂ ಗಣಪತ್ಯಥರ್ವಶೀರ್ಷ ಹವನಗಳು ಜರುಗಲಿವೆ.
​ಸಾಯಂಕಾಲ ಶ್ರೀಸೂಕ್ತ ಮತ್ತು ಪುರುಷಸೂಕ್ತ ಪಾರಾಯಣ, ಶಯ್ಯಾಧಿವಾಸ, ಚಕ್ರಾಬ್ಜ ಮಂಡಲಪೂಜೆ ಹಾಗೂ ಪ್ರತಿಷ್ಠಾಪೂರ್ವಾಂಗ ಹವನಗಳು ನಡೆಯಲಿವೆ. ಕೊನೆಯಲ್ಲಿ ಅಷ್ಟಾವಧಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳು ಇರಲಿವೆ. ನಾಲ್ಕು ದಿನಗಳ ಈ ವೈಭವದ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಹಾಗೂ ಪ್ರಸಾದ ಸ್ವೀಕರಿಸಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.