ಸುದ್ದಿ ಕನ್ನಡ ವಾರ್ತೆ
​​ಹೊನ್ನಾವರ: ತಾಲೂಕಿನ ಗುಣವಂತೆಯ ಮುಗಳಿಯ ವಾಸು ಈಶ್ವರ ನಾಯ್ಕ ಅವರ ಮನೆಯ ಬಾವಿಯಲ್ಲಿ ಚಿರತೆ ಬಿದ್ದು ಕೆಲ ಕಾಲ ಆತಂಕ ವ್ಯಕ್ತವಾಯಿತು.

​ತಾಲೂಕಿನ ಅಪ್ಪರ್‌ಕೋಂಡ ಸಮೀಪದ ಮುಗಳಿಯ ಮನೆಯ ಸಮೀಪದ ಬಾವಿಯಲ್ಲಿ ಮಂಗಳವಾರ ಮುಂಜಾನೆ ಚಿರತೆ ಕಾಣಿಸಿಕೊಂಡಿದೆ. ರಾತ್ರಿ ಸಮಯದಲ್ಲಿ ಆಹಾರ ಹುಡುಕುತ್ತಾ ಬಂದಾಗ ಆಕಸ್ಮಿಕವಾಗಿ ಚಿರತೆಯು ಬಾವಿಗೆ ಬಿದ್ದಿರಬಹುದು ಎನ್ನಲಾಗಿದೆ.

​ಮಂಗಳವಾರ ಬೆಳಗಿನ ಜಾವ ಮನೆಯವರು ಬಾವಿ ನೀರಿಗಾಗಿ ಪಂಪ್ ಆನ್ ಮಾಡಿದರು, ಬಾವಿಯಿಂದ ನೀರು ಬರದಿರುವುದನ್ನು ಗಮನಿಸಿದ ಮನೆಯವರು ಬಾವಿಗೆ ಹೋಗಿ ನೋಡಿದಾಗ ಬಾವಿಯಲ್ಲಿ ಚಿರತೆ ಕಂಡು ಕೆಲ ಸಮಯ ಭಯಗೊಂಡರು. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿದಾಗ, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ದೌಡಾಯಿಸಿದ್ದಾರೆ.

​ಬಳಿಕ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಚಿರತೆಯನ್ನು ಬಾವಿಯಿಂದ ಮೇಲಕ್ಕೆ ತರುವಲ್ಲಿ ತಂಡ ಯಶಸ್ವಿಯಾಗಿದೆ. ನಂತರ ಬೋನಿನ ಮೂಲಕ ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡುವ ಮೂಲಕ ಅಧಿಕಾರಿಗಳು ಸಾರ್ವಜನಿಕರ ಆತಂಕವನ್ನು ದೂರ ಮಾಡಿದರು. ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆ ಬಾವಿಯಲ್ಲಿ ಬಿದ್ದ ವಿಷಯ ತಿಳಿದು, ಜಮಾವಣೆಗೊಂಡಾಗ ಅಧಿಕಾರಿಗಳು ಕಾರ್ಯಾಚರಣೆ ಮುಗಿದ ಬಳಿಕ ಚಿರತೆ ವೀಕ್ಷಿಸಲು ಅನುವು ಮಾಡಿಕೊಟ್ಟರು.