Banner Ad

ಸುದ್ದಿ ಕನ್ನಡ ವಾರ್ತೆ

ಬನವಾಸಿ: ಇಲ್ಲಿನ ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ವಾರ್ಷಿಕ ಮಹಾರಥೋತ್ಸವು ಸೋಮವಾರ ರಾತ್ರಿ ಭಕ್ತರ ಹರ್ಷೋದ್ದಾರದ ನಡುವೆ ಸಡಗರ ಸಂಭ್ರಮದಿಂದ ನೆರವೇರಿತು.

Banner Ad

ಸೋಮವಾರ ಮುಂಜಾನೆ ಉಮಾಮಧುಕೇಶ್ವರ ದೇವರಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಿ, ಬಲಿ, ಜಪ, ಹವನದ ಬಳಿಕ ಉಮಾ ಮಧುಕೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮಾಡಲಾಯಿತು.
ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಉಮಾಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುಂಜಾನೆಯಿಂದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಹೂ, ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.

ರಾತ್ರಿ 12:30ರವರೆಗೆ ಅಧಿಕ ಭಕ್ತರು ದರ್ಶನ ಪಡೆದರು. ರಾತ್ರಿ 12:30 ಕ್ಕೆ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ಉಮಾಮಧುಕೇಶ್ವರ ದೇವರ ಮನ್ಮಹಾಸ್ಯಂದನೋತ್ಸವ ಆರಂಭಗೊಂಡಿತು. ಬಣ್ಣ ಬಣ್ಣದ ಪತಾಕೆ, ಬೃಹತ್ ರುದ್ರಾಕ್ಷಿ ಮಾಲೆ, ವಿವಿಧ ಫಲ ಪುಷ್ಪ, ವಿದ್ಯುತ್ ದೀಪಗಳಿಂದ ಅಲ೦ಕರಿಸಿದ ಮಹಾರಥವನ್ನು ಭಕ್ತ ಸಮೂಹ ಹರಹರ ಮಹಾದೇವ ಎಂಬ ಜಯ ಘೋಷ ಮೊಳಗಿಸುತ್ತ ಎಳೆಯುತ್ತ ಸಾಗಿದರು. ವಿವಿಧ ವಾದ್ಯ ಮೇಳಗಳು ಮಹಾರಥೋತ್ಸವಕ್ಕೆ ಭಕ್ತಿಯ ಮೆರಗು ನೀಡಿತು. ನೆರೆದಿದ್ದ ಸಾವಿರಾರು ಭಕ್ತರು ಹೂ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ವಯಸ್ಕರು, ಪುರುಷರು, ಮಹಿಳೆಯರು, ಮಕ್ಕಳು ಜಾತಿ ಭೇದವನ್ನು ಮರೆತು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡರು. ಸುಮಾರು 5 ಗಂಟೆಗಳ ಕಾಲ ಜರುಗಿದ ಮಹಾ ರಥೋತ್ಸವ ಮಂಗಳವಾರ ಮುಂಜಾನೆ 5ರ ಗಂಟೆಗೆ ಮಹಾ ರಥೋತ್ಸವ ಸಂಪನ್ನಗೊಂಡಿತು. ಬುಧವಾರ ಅವಭ್ರತ ತೀರ್ಥಸ್ನಾನದ ಬಳಿಕ ಕಳೆದ ಒಂದು ವಾರದಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ತೆರೆ ಬಿಳಲಿದೆ.

ಬಿಗಿ ಪೊಲೀಸ್ ಬಂದೋಬಸ್ತ್: ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಡಿವೈಎಸ್‌ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ್ ವರ್ಮ ಮಾರ್ಗದರ್ಶನದಲ್ಲಿ ಬನವಾಸಿ ಪೊಲೀಸ್‌ ಠಾಣೆಯ ಪಿಎಸ್‌ಐಗಳಾದ ಮಾಂತೇಶ ಕುಂಬಾರ, ರವೀಂದ್ರ ಬಿರಾದಾರ ನೇತೃತ್ವದಲ್ಲಿ ಬನವಾಸಿ ಪೊಲೀಸ್ ಠಾಣೆ ಹಾಗೂ ಬೇರೆಬೇರೆ ಠಾಣೆಗಳಿಂದ ಆಗಮಿಸಿದ ಪೊಲೀಸ್ ಇಲಾಖೆಯ ಪಿಎಸ್‌ಐಗಳು, ಆರಕ್ಷಕ ಸಿಬ್ಬಂದಿ ಸುಗಮ ವಾಹನ ಸಂಚಾರ ಹಾಗೂ ಶಾಂತಿ ಸುವ್ಯವಸ್ಥೆ ಕೈಗೊಂಡಿದ್ದರು.

Banner Ad