ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದ ಕಾರ್ಯಕ್ರಮ ಮಂಗಳವಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಶಿಕ್ಷಕಿಯಾದ ಸುಮನಾರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಏಳನೇಯ ತರಗತಿಯ ವಿದ್ಯಾರ್ಥಿಗಳು ಸ್ವಾಗತ,ಪ್ರಾರ್ಥನೆ ಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸಹ ಶಿಕ್ಷಕ ವೃಂದದವರು ಮಾತನಾಡಿ ಕಳೆದ ಏಳು ವರ್ಷಗಳಿಂದ ತಾವು ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದೀರಿ, ಮುಂದಿನ ಪ್ರೌಢಶಾಲೆಯ ಹಂತದ ಶಿಕ್ಷಣಕ್ಕಾಗಿ ಹೋಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ತಾವುಗಳು ಶಿಸ್ತು,ಸಮಯ ಪ್ರಜ್ಞೆ,ಸಂಯಮ, ಕಠಿಣ ಪರಿಶ್ರಮ,ಉತ್ತಮ ಸಂಸ್ಕಾರಗಳನ್ನು ನಿರಂತರ ಉಳಿಸಿಕೊಂಡು ಕಲಿತ ಶಾಲೆಗೆ,ಕಲಿಸಿದ ಗುರುವನ್ನು ಗೌರವದಿಂದ ಕಾಣಬೇಕು. ಎಲ್ಲರೂ ಸಮಾಜದ ಉಪಯೋಗಿ ನಾಗರೀಕರಾಗಿ ಬದುಕಬೇಕು,ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ,ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ಮಾತನಾಡಿ ನಮ್ಮ ಶಾಲೆಯ ಎಲ್ಲಾ ಶೈಕ್ಷಣಿಕ ವಿಭಾಗದ ಚಟುವಟಿಕೆಗಳಲ್ಲಿ ಪ್ರತಿಭಾ ಕಾರಂಜಿ,ಕ್ರೀಡಾಕೂಟದಲ್ಲಿ ಭಾಗವಹಿಸಿ,ಉತ್ತಮ ಸಾಧನೆ ಮಾಡಿ ಶಾಲೆಯ,ಊರಿನ, ಶಿಕ್ಷಕರ, ಪಾಲಕರ,ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದೀರಿ, ಮುಂದಿನ ಪ್ರೌಢಶಾಲೆಯ ಹಂತದಲ್ಲಿಯೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಇನ್ನೂ ಹೆಚ್ಚಿನ ಸಾಧನೆ ಮಾಡಿ ತನ್ಮೂಲಕ ಎಲ್ಲರ ಕೀರ್ತಿಯನ್ನು ಬೆಳಗಿಸಿ, ಸಮಾಜದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಗೌರವಯುತ ವ್ಯಕ್ತಿಗಳಾಗಿ ಬದುಕಬೇಕು. ಅದುವೇ ನಮಗೆ ನೀವು ನೀಡುವ ಗುರುಕಾಣಿಕೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಪಂಚೆ,ಅಂಗಿ ವಿದ್ಯಾರ್ಥಿನಿಯರು ಸೀರೆ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಚವ್ಹಾಣ,ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ,ಪಿಲೋಮೀನ ನರೋನ,ಸುಮನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರನ್ನು ವಂದಿಸಲಾಯಿತು.
