ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ನಗರದ ರೈಲು ಪುನರಾರಂಭದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣರವರು ನೀಡಿದ ಭರವಸೆಯಂತೆ, ಅಳ್ಳಾವರ ಮತ್ತು ದಾಂಡೇಲಿ ನಡುವೆ ಸಂಚರಿಸುವ ಮೂರು ಜೋಡಿ ಡೆಮು (DEMU) ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದ್ದು, ಈ ನೂತನ ವೇಳಾಪಟ್ಟಿಯು ಮಾರ್ಚ್ 17, 2026 ರಿಂದ ಜಾರಿಗೆ ಬರಲಿದೆ.ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಸಮಯ ಬದಲಾವಣೆ ಮಾಡಿಕೊಟ್ಟಿದ್ದಕ್ಕಾಗಿ ನಾನು ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನ ಎಂದು ಉತ್ತರಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ಆದೇಶದಂತೆ, ಈ ಹಿಂದೆ ಭಾನುವಾರ ರಜೆ ಇರುತ್ತಿದ್ದ ಈ ರೈಲುಗಳು ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಉಳಿದ ಆರು ದಿನಗಳ ಕಾಲ ಸಂಚರಿಸಲಿವೆ.
ಸಮಯದ ಬದಲಾವಣೆಯಂತೆ, ರೈಲು ಸಂಖ್ಯೆ 76501 ಅಳ್ಳಾವರದಿಂದ ಬೆಳಿಗ್ಗೆ 05:00 ಕ್ಕೆ ಹೊರಟು 05:45 ಕ್ಕೆ ದಾಂಡೇಲಿ ತಲುಪಲಿದೆ ಮತ್ತು ರೈಲು ಸಂಖ್ಯೆ 76502 ದಾಂಡೇಲಿಯಿಂದ ಬೆಳಿಗ್ಗೆ 06:15 ಕ್ಕೆ ಹೊರಟು 07:00 ಕ್ಕೆ ಅಳ್ಳಾವರ ತಲುಪಲಿದೆ. ರೈಲು ಸಂಖ್ಯೆ 76503 ಅಳ್ಳಾವರದಿಂದ ಬೆಳಿಗ್ಗೆ 07:35 ಕ್ಕೆ ಹೊರಟು 08:20 ಕ್ಕೆ ದಾಂಡೇಲಿ ತಲುಪಲಿದ್ದು, ಮಧ್ಯಾಹ್ನದ ರೈಲು ಸಂಖ್ಯೆ 76504 ರ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅದೇ ರೀತಿ ಸಂಜೆಯ ರೈಲು ಸಂಖ್ಯೆ 76505 ಅಳ್ಳಾವರದಿಂದ 18:00 ಕ್ಕೆ ಹೊರಟು 18:45 ಕ್ಕೆ ದಾಂಡೇಲಿ ತಲುಪಲಿದ್ದು, ಮರಳಿ ಬರುವ ರೈಲು ಸಂಖ್ಯೆ 76506 ದಾಂಡೇಲಿಯಿಂದ 19:05 ಕ್ಕೆ ಹೊರಟು 19:50 ಕ್ಕೆ ಅಳ್ಳಾವರ ತಲುಪಲಿದೆ. ಈ ಬದಲಾದ ಸಮಯದ ಸೌಲಭ್ಯವನ್ನು ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ಸಂಸದರು ವಿನಂತಿಸಿದ್ದಾರೆ.
