ಸುದ್ದಿ ಕನ್ನಡ ವಾರ್ತೆ

ಶಿರಸಿ:ನಗರದ ಜಾಗೃತಿ ಫೌಂಡೇಶನ್ ಮೂಲಕ ಕಳೆದ ವರ್ಷವಷ್ಟೇ ಶಿರಸಿಯಲ್ಲಿ ಆರಂಭಗೊಂಡ “ಬಚಪನ್” ಪೂರ್ವ ಪ್ರಾಥಮಿಕ ಶಾಲೆಗೆ “ವರ್ಷದ ಎಡ್ ಟೆಕ್ ಶಾಲೆ” ಪ್ರಶಸ್ತಿ ಪ್ರಕಟಿಸಲಾಗಿದೆ.

ರಾಷ್ಟ್ರ ಮಟ್ಟದಲ್ಲಿ ಕಲಿಕಾ ವಿಧಾನ, ಗುಣಮಟ್ಟ ಮತ್ತು ತಾಂತ್ರಿಕ ಅಳವಡಿಕೆಯನ್ನಾಧರಿಸಿ ಕೇವಲ 3 ಶಾಲೆಗಳಿಗೆ ಕೊಡಮಾಡುವ “ವರ್ಷದ ಎಡ್ ಟೆಕ್ ಶಾಲೆ” ಪ್ರಶಸ್ತಿಯನ್ನು ಶಿರಸಿಯ “ಬಚಪನ್” ಪೂರ್ವ ಪ್ರಾಥಮಿಕ ಶಾಲೆಗೆ ಪ್ರಕಟಿಸಲಾಗಿದೆ. ಉಳಿದಂತೆ ಉತ್ತರ ಪ್ರದೇಶ ಮತ್ತು ರಾಜಸ್ತಾನದ ತಲಾ ಒಂದು ಶಾಲೆಗೆ ಈ ಪ್ರಶಸ್ತಿ ಲಭಿಸಿದ್ದು ಇದೇ ಮಾರ್ಚ್ 29ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಜಾಗತಿಕವಾಗಿ ಒಟ್ಟೂ 1200ಕ್ಕೂ ಹೆಚ್ಚು ಕಡೆಗಳಲ್ಲಿ ಬಚಪನ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಈ ಪ್ರಶಸ್ತಿಯಿಂದಾಗಿ ಇನ್ನೂ ಹೆಚ್ಚಿನ ಪ್ರೇರಣೆ ದೊರಕಿದಂತಾಗಿದೆ ಎಂದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಎಂ.ಎಂ. ಹೆಗಡೆ ಬಕ್ಕಳ, ಕಾರ್ಯದರ್ಶಿ ಸಿಎ. ಎಂ.ಎಸ್. ಶೆಟ್ಟಿ ಮತ್ತು ಟ್ರಸ್ಟಿ ಸಿಎ. ಅಂಜನಾ ಶೆಟ್ಟಿ, ಈ ‘ಮಾಸ್ಕೋ ಪ್ರಶಸ್ತಿ 2025-26’ ಪಡೆಯುವಲ್ಲಿ ವಿಶೇಷವಾಗಿ ಸಹಕರಿಸಿದ ಶಿಕ್ಷಕವೃಂದ ಮತ್ತು ಕೌನ್ಸಿಲರ್ ಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.ಮಲೆನಾಡಿನ ಭಾಗದ ಪುಟ್ಟ ಪಟ್ಟಣವೊಂದರ ಶಾಲೆಯು ತಾಂತ್ರಿಕ ಶಿಕ್ಷಣದಲ್ಲಿ ರಾಷ್ಟ್ರ ಮಟ್ಟದ ಗಮನ ಸೆಳೆದಿರುವುದು ಶೈಕ್ಷಣಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.