ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಜಾತಿ ಪದ್ಧತಿಯನ್ನು ಮನೆಯಲ್ಲಿ ಇಟ್ಟು,ಹೊರಗೆ ಬಂದಾಗ ನಾವೆಲ್ಲರೂ ಹಿಂದೂಗಳು ಎಂಬ ಭಾವನೆಯಿಂದ ಮೆರೆಯೋಣ. ವಿವೇಕ ಸಂಸ್ಕೃತಿಯನ್ನು ಸ್ಮರಿಸೋಣ, ನಮ್ಮ ಸಂಸ್ಕಾರ, ಸಂಸ್ಕೃತಿ ನಮ್ಮನ್ನು ವಿಶ್ವದಲ್ಲಿ ಗುರುತಿಸುವಂತೆ ಮಾಡಿದೆ. ಭಾರತವನ್ನು ವಿಶ್ವಗುರುವನ್ನಾಗಿಸಲು ನಾವೆಲ್ಲ ಪಣ ತೊಡೋಣ ಎಂದು ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಕುಂಬಾರವಾಡಾದಲ್ಲಿ ಆಯೋಜಿಸಿದ ವಿಶ್ವ ವಿಶ್ವ ಹಿಂದು ಪರಿಷತ್ತು, ನರೇಂದ್ರ ಮಹಾರಾಜ ಸಂಪ್ರದಾಯ ಹಾಗು ವಿವಿಧ ಹಿಂದು ಸಂಘಟನೆಗಳ ಸಹಯೋಗದಲ್ಲಿ ಇಂದು ರವಿವಾರ ವಿರಾಟ ಹಿಂದು ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕುಂಬಾರವಾಡಾ ಮಹಾಸತಿ ದೇವಸ್ಥಾನದಿಂದ ಕ್ಷೇತ್ರಪಾಲ ಸಭಾಮಂಟಪದವರೆಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಭವ್ಯ ಶೋಭಾಯಾತ್ರೆ ನಡೆಸಿದರು. ಯುವಜನರು ಶ್ರೀರಾಮ, ಲಕ್ಷ್ಮಣ ಸೀತೆ, ಹನುಮಂತ ಹಾಗೂ ವಿವಿಧ ಪೌರಾಣಿಕ ಪುರುಷರ ಪಾತ್ರಧಾರಿಯಾಗಿದ್ದು ವಿಶೇಷವಾಗಿತ್ತು. 15ಕ್ಕೂ ಹೆಚ್ಚು ಅವಿಭಕ್ತ ಕುಟುಂಬದವರಿಗೆ ಸನ್ಮಾನಿಸಲಾಯಿತು. ಅರ್ಜುನ ನಾಯ್ಕ ದಿಕ್ಸೂಚಿ ಭಾಷಣ ಮಾಡಿ ಮಾರ್ಗದರ್ಶನ ಮಾಡಿದರು.ಹಿರಿಯ ವೈದ್ಯರಾದ ಡಾ.ಎಸ್. ಕೆ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನರೇಂದ್ರ ಮಾಹಾರಾಜ ಸಂಪ್ರದಾಯದ ವಿಕಾಸ ವೇಳಿಪ್, ವಾರಕರಿ ಸಂಪ್ರದಾಯದ ಸಂದೀಪ ವೇಳಿಪ್, ಅಯ್ಯಪ್ಪ ಸ್ವಾಮಿ ಸಂಪ್ರದಾಯದ ಸಂಜಯ ಡೇರೆಕರ್, ಜಾನಪದ ಹಾಡುಗಾರ್ತಿ ರುಕ್ಷ್ಮಿಣಿ ವೇಳಿಪ್ ಹಾಗೂ ಆಯೋಜನಾ ಸಮಿತಿಯ ಪ್ರಮುಖರಾದ ಮತ್ತು ಶೇಟ, ಚಂದ್ರಕಾಂತ ದೇಸಾಯಿ ಮತ್ತು ಚಂದ್ರಶೇಖರ ಬಂಗಾರಿ ಉಪಸ್ಥಿತರಿದ್ದರು. ಹನುಮಾನ್ ಚಾಲೀಸಾ ಪಠಣ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮವು ಭಕ್ತಿಯುತವಾಗಿ ಮುಕ್ತಾಯಗೊಂಡಿತು.
