ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ ಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಾವಿತ್ರಿಬಾಯಿ ಪುಲೆಯವರ ಭಾವಚಿತ್ರಕ್ಕೆ ಉಪಸ್ಥಿತರಿದ್ದ ಎಲ್ಲರೂ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ, ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ,ಸಹ ಶಿಕ್ಷಕಿಯರಾದ ನಾಗರತ್ನಾ ಮೋಗೇರ ಸಾವಿತ್ರಿಬಾಯಿ ಪುಲೆಯವರ ಕುರಿತು ಮಾತನಾಡಿದರು. ಸಾವಿತ್ರಿಬಾಯಿ ಪುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ,ಮಹಾನ್ ಸಾಮಾಜಿಕ ಹೋರಾಟಗಾರ್ತಿ ಆಗಿದ್ದು ಮಹಿಳಾ ಶಿಕ್ಷಣ ಹಾಗೂ ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಪತಿ ಜ್ಯೋತಿರಾವ್ ಪುಲೆ ಅವರೊಂದಿಗೆ ಸೇರಿ ಹುಡುಗಿಯರಿಗಾಗಿ ಶಾಲೆಗಳನ್ನು ತೆರೆದು,ಬಾಲ್ಯವಿವಾಹ,ಸತಿಪದ್ಧತಿಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಸತ್ಯಶೋಧಕ ಸಮಾಜದ ಮೂಲಕ ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಶ್ರಮಿಸಿದರು, ದಮನಿತರ ಮತ್ತು ಮಹಿಳೆಯರ ಸಬಲೀಕರಣಕ್ಕೆ ಮಾರ್ಗದರ್ಶಕರಾದರು. ಬಾಲ್ಯದಲ್ಲಿ ಓದುವ ಹಕ್ಕನ್ನು ಕಸಿದುಕೊಂಡಾಗ ಶಿಕ್ಷಣ ಕಲಿಯುವ ದೃಡ ನಿರ್ಧಾರ ಮಾಡಿದರು.

ವಿಧವೆಯರಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು.ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದರು. ದಲಿತರಿಗಾಗಿ ಕುಡಿಯುವ ನೀರಿನ ಟ್ಯಾಂಕಗಳನ್ನು ತೆರೆಸಿದರು ಈ ರೀತಿಯಾಗಿ ಅನೇಕ ಮಹಾನ್ ಸಾಮಾಜಿಕ ಕಾರ್ಯಗಳನ್ನು ಮಾಡಿದ ಶಿಕ್ಷಣ ಮಾತೆ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕಿಯಾದ ಅನೀಸ್ ಪಾತೀಮಾರವರು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.ಅತಿಥಿ ಶಿಕ್ಷಕಿ ಸಂಜನಾ ಮಿರಾಶಿ ಸಹಕಾರ ನೀಡಿದರು.