Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದರ ಜಾಯಿಂಟ್ ಎಕ್ಸಲ್ ಕಳಚಿ ಬಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಸುಮಾರು 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುದಗಾ-ಕಾರವಾರ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚರಿಸುವ ಸಂದರ್ಭದಲ್ಲಿ ಬಸ್ ಸುರಂಗ ಮಾರ್ಗದ ಒಳಭಾಗದಲ್ಲಿ ಸಾಗುತ್ತಿದ್ದಾಗ, ಹಿಂಭಾಗದಿಂದ ಭಾರಿ ಶಬ್ದ ಕೇಳಿಬಂದಿದೆ. ತಕ್ಷಣ ಎಚ್ಚೆತ್ತ ಚಾಲಕ ಪರಿಸ್ಥಿತಿಯನ್ನು ಅರಿತು ಬಸ್ಸನ್ನು ನಿಲ್ಲಿಸಿದ್ದಾರೆ.

Banner Ad

ಶಬ್ದದ ತೀವ್ರತೆಗೆ ಆತಂಕಗೊಂಡ ಸುಮಾರು 25ಕ್ಕೂ ಹೆಚ್ಚಿನ ಪ್ರಯಾಣಿಕರು ತಕ್ಷಣವೇ ಬಸ್ಸಿನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ. ನಂತರ ಚಾಲಕ,ನಿರ್ವಾಹಕರು ಪರಿಶೀಲಿಸಿದಾಗ ಬಸ್ಸಿನ ಜಾಯಿಂಟ್ ಎಕ್ಸಲ್ ಕಳಚಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳು ಸಂಭವಿಸಿಲ್ಲ ಎನ್ನಲಾಗಿದೆ.

ವಿಷಯ ತಿಳಿದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಟ್ಟು ನಿಂತ ಬಸ್ಸನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಚಾಲಕನ ಜಾಗ್ರತೆ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು,ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಇದೀಗ ಜನಸಾಮಾನ್ಯರು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Banner Ad