ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ)ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಶಿಂದೋಳಿ ಇವರ ಸಂಯುಕ್ತಾಶ್ರಯದಲ್ಲಿ ರಾಮನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:10-11-2025 ರ ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿಯಲ್ಲಿ ಅದ್ಧೂರಿಯಾಗಿ ನಡೆಯಿತು.

ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ಅಧ್ಯಕ್ಷರು,ಸರ್ವ ಸದಸ್ಯರು ಎಸ್.ಡಿ.ಎಮ್.ಸಿ ಸ.ಹಿ.ಪ್ರಾ.ಶಾಲೆ ಶಿಂದೋಳಿ,ಸಮೂಹ ಸಂಪನ್ಮೂಲ ಕೇಂದ್ರ ರಾಮನಗರದ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ವಿದ್ಯಾರ್ಥಿಗಳು,ಕಳಸ ಹೊತ್ತ ಮಾತೆಯರು,ಅಲಂಕೃತ ಎತ್ತಿನಗಾಡಿ,ವಾದ್ಯಗಳ ಜೊತೆ ಶಿಂದೋಳಿ ಊರಿನ ಪರಿಸರದಲ್ಲಿ ಭವ್ಯವಾದ ಮೆರವಣಿಗೆಯು ರಾಮನಗರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ (ಸಿ.ಆರ್.ಪಿ)ಬಿ.ಹೆಚ್.ಬಾಗವಾನ ನೇತೃತ್ವ,ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ನಂತರ ಸಭಾ ಕಾರ್ಯಕ್ರಮವನ್ನು ಊರಿನ ಮಿರಾಶಿ ಯೋಗೇಶರವರ ವಿದ್ಯಾ ದೇವತೆಯಾದ ಶಾರದಾ ಮಾತೆಯ ಪೂಜನದೊಂದಿಗೆ ಆರಂಭಿಸಲಾಯಿತು.ಊರಿನ ಪ್ರಮುಖರಾದ ತುಕಾರಾಮ ಠಾಕೂರ ಸಹಕಾರ ನೀಡಿದರು.ಈ ಸಂದರ್ಭದಲ್ಲಿ ಶಿಂದೋಳಿ ಶಾಲೆಯ ವಿದ್ಯಾರ್ಥಿನಿಗಳಿಂದ ಪ್ರಾರ್ಥನೆ,ಸ್ವಾಗತ ಗೀತೆ ಗಾಯನ ನಡೆಯಿತು. ವೇದಿಕೆ ಕಾರ್ಯಕ್ರಮದ ಅತಿಥಿ ಗಣ್ಯರನ್ನು ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಆತ್ಮೀಯವಾಗಿ, ಹೃದಯಪೂರ್ವಕವಾಗಿ ವಿದ್ಯಾರ್ಥಿನಿಗಳಿಂದ ಹೂವನ್ನು ನೀಡುವ ಮೂಲಕ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಮನಗರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ (ಸಿ.ಆರ್.ಪಿ)ಬಿ.ಹೆಚ್.ಬಾಗವಾನರವರು ನಮ್ಮ ಕ್ಲಸ್ಟರ್ ವ್ಯಾಪ್ತಿಯ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕ,ಸಹ ಶಿಕ್ಷಕರ ಹಾಗೂ ಕ್ರೀಯಾಶೀಲ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಗ್ರಾಮದ ಎಲ್ಲಾ ಜನರ ಸಹಕಾರದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿರುವುದು ಹೆಮ್ಮೆಯ ಸಂಗತಿ.ಹಿಂದಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಂತ್ರಿಗಳಾಗಿದ್ದ,ಈಗಿನ ಉತ್ತರಕನ್ನಡ ಜಿಲ್ಲೆಯ ಸಂಸದರು ಆಗಿರುವ ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಾಲಾ ಮಕ್ಕಳಿಗೆ ಆಟ,ಪಾಠದ ಜೊತೆ ತಮ್ಮಲ್ಲಿರುವ ಕಲೆ,ಸಾಹಿತ್ಯ,ಸಂಗೀತ,ಸಾಂಸ್ಕೃತಿಕ ವಿಭಾಗದಲ್ಲಿನ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆರಂಭಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿ, ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ತಾಲೂಕು ಪಂಚಾಯತ ಉಪಾಧ್ಯಕ್ಷರಾದ ವಿಜಯ ಪಂಡಿತ ಮಾತನಾಡಿ ನಮ್ಮ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಶಿಂದೋಳಿಯಂತಹ ಚಿಕ್ಕ,ಚೊಕ್ಕ ಊರಿನಲ್ಲಿ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ನನಗೆ ಅತೀ ಆನಂದವಾಗಿದೆ.ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾರುತಿ ಗಾವಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾತನಾಡಿ ಘನವೆತ್ತ ಸರ್ಕಾರವು ಮಕ್ಕಳ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು,ಅದರ ಸದುಪಯೋಗ ಸರಿಯಾಗಿ ಪಡೆದುಕೊಳ್ಳಬೇಕು. ಗ್ರಾಮದ ಜನರು ನಮ್ಮೆಲ್ಲರ ನಿರಂತರ ಸಂಪರ್ಕದಿಂದ ಊರಿಗೆ,ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಿ, ನಮ್ಮೆಲ್ಲರ ಸಹಕಾರ ಯಾವಾಗಲೂ ಇರುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಕುರಿತು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಕೇವಲ ಇಲಾಖೆಯಿಂದ ಅಷ್ಟೇ ಸಾದ್ಯವಿಲ್ಲ, ಸಮುದಾಯದ ಸಹಕಾರ ಅತೀ ಅವಶ್ಯಕ,ಮಕ್ಕಳಿಗೆ ಪ್ರೋತ್ಸಾಹ, ಶಿಕ್ಷಕ ವೃಂದದವರಿಗೆ ಸಹಕಾರ, ಸಮುದಾಯದ ಬೆಂಬಲ ಇದ್ದಲ್ಲಿ ಕಾರ್ಯಕ್ರಮದ ಯಶಸ್ಸು ಖಂಡಿತ.ಇಲ್ಲಿನ ಶಾಲಾ ಆಡಳಿತ ಮಂಡಳಿಯವರಿಂದ,ಶಿಕ್ಷಕವೃಂದದವರಿಂದ ಹಿಡಿದು,ಗ್ರಾಮದ ಊರಿನ ಮಾತೆಯರು, ಹಿರಿಯರು,ಪಾಲಕರು,ಪೋಷಕರ ಉತ್ಸಾಹ ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಂದೋಳಿ ಶಾಲೆಯ ಹೆಸರು ಸದಾ ಒಂದಿಲ್ಲೊಂದು ಉತ್ತಮ ಚಟುವಟಿಕೆಯ ಮೂಲಕ ಗಮನ ಸೆಳೆಯಲು ತನು,ಮನ,ಧನದ ಸಹಕಾರದ ಉದಾರ ಮನಸ್ಸಿನ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ ಮಾತನಾಡುತ್ತಾ ನಮ್ಮ ಊರಿನ ಶಾಲೆಯಲ್ಲಿ ರಾಮನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ನನಗೆ ಅತೀ ಸಂತೋಷವಿದ್ದು,ಆಡಳಿತ ಮಂಡಳಿಯ ಉಪಾಧ್ಯಕ್ಷರು,ಸರ್ವ ಸದಸ್ಯರುಗಳ,ಶಿಕ್ಷಕ ವೃಂದದವರ, ಗ್ರಾಮ ಪಂಚಾಯತ ವ್ಯಾಪ್ತಿಯ ಜನಪ್ರತಿನಿಧಿಗಳ, ಅಧಿಕಾರಿ ವರ್ಗದವರ ನಿರಂತರ ಬೆಂಬಲ ನಮಗೆ ಉತ್ತಮ ಕಾರ್ಯಕ್ರಮ ನಡೆಸಲು ಪ್ರೇರೆಪಣೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯಾವುದೇ ಸ್ಥಳೀಯ,ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಗಳಿಗೆ ಬೆನ್ನೆಲುಬಾಗಿ ನಿರಂತರ ಸಹಕಾರ ನೀಡುವ ಕ್ರಿಯಾಶೀಲ ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ಕಾಪೋಲಕರ ಹಾಗೂ ರಾಮನಗರ ಕ್ಲಸ್ಟರಿನ ಕ್ರಿಯಾಶೀಲ,ಸದಾ ಹಸನ್ಮುಖಿ ವ್ಯಕ್ತಿತ್ವದ, ಕಷ್ಟಸುಖಗಳಿಗೆ ಸದಾ ಸ್ಪಂದಿಸುವ ಸ್ನೇಹಜೀವಿ,ಹಿರಿಯಲರಿರಲಿ,ಕಿರಿಯರಿರಲಿ ಎಲ್ಲರನ್ನೂ ಪ್ರೀತಿಯಿಂದ, ಗೌರವದಿಂದ ಮಾತನಾಡಿಸುವ ಸಮಾನಜೀವಿ,ಶೈಕ್ಷಣಿಕ ವಲಯದ ಎಲ್ಲಾ ಚಟುವಟಿಕೆಗಳಲ್ಲಿ ಹುರಿದುಂಬಿಸುವ ಮನೋಭಾವನೆಯಿಂದ ತಮ್ಮ ಚಟುವಟಿಕೆಯ ಮೂಲಕ ಎಲ್ಲರಿಗೆ ಮಾದರಿಯಾಗಿರುವ ಸಿ.ಆರ್.ಪಿ ಬಿ.ಹೆಚ್.ಬಾಗವಾನ ಸರ್ ಅವರನ್ನು ಶಾಲೆಯ ಶಿಕ್ಷಕ ವೃಂದದವರರು,ಶಾಲಾ ಆಡಳಿತ ಮಂಡಳಿಯವರು,ವೇದಿಕೆಯ ಮೇಲಿದ್ದ ಗಣ್ಯರು ಶಾಲು ಹೊದಿಸಿ,ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ತಾಲೂಕಾ ಪಂಚಾಯತ ಅಧ್ಯಕ್ಷ ಅರವಿಂದ ಕಾಪೋಲಕರ,ಮಹೇಶ ಪಂಡಿತ, ಶಂಕರ ನಾಯ್ಕ,ಕಾನೇಕರ ಲೇನ ಶಾಲೆಯ ಮುಖ್ಯ ಶಿಕ್ಷಕಿಯರಾದ ಸವಿತಾ ನಾಯಕ,ರಾಮನಗರ ಪ್ರೌಢಶಾಲೆಯ ಸಹ ಶಿಕ್ಷಕಿ ಪೂರ್ಣಿಮಾ ನಾಯ್ಕ,ಊರಿನ ಪ್ರಮುಖರಾದ ಶಂಕರ ಮಸೂರಕರ,ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ಕಾಪೋಲಕರ,ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ತನುಜಾ ಮಸರೂಕರ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.ವೇದಿಕೆಯ ಮೇಲಿದ್ದ ಗಣ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.ಸಭಾ ಕಾರ್ಯಕ್ರಮದ ಕೊನೆಯಲ್ಲಿ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ರಾಮನಗರ ಕ್ಲಸ್ಟರಿನ ಸಿ.ಆರ್.ಪಿ ಬಿ.ಹೆಚ್.ಬಾಗವಾನ ಸರ್ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರುಗಳ,ಸಹ ಶಿಕ್ಷಕರುಗಳ,ಶಾಲೆಯ ಹಳೆಯ ವಿದ್ಯಾರ್ಥಿಗಳ,ಊರಿನ ಎಲ್ಲಾ ವರ್ಗದ ಜನರ ಸಹಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ,ವೇದಿಕೆಯ ಮೇಲಿನ ಎಲ್ಲಾ ಗಣ್ಯರಿಗೆ ವಂದನೆಗಳನ್ನು ಸಲ್ಲಿಸಿದರು.ಸಹ ಶಿಕ್ಷಕರಾದ ಆನಂದ. ಪಿ.ವಿದ್ಯಾ ಮೇಡಂ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿ ಗಣ್ಯರಿಗೆ,ರಾಮನಗರ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಎಲ್ಲಾ ಮುಖ್ಯ ಶಿಕ್ಷಕರಿಗೆ,ಸಹ ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ,ಊರಿನ ಗ್ರಾಮಸ್ಥರಿಗೆ ಊರಿನ ಜನರ ಸಹಕಾರದಿಂದ ಶಾಲೆಯ ವತಿಯಿಂದ ಬೆಳಿಗ್ಗೆ ಕಾರ್ಯಕ್ರಮದ ಮೊದಲು ಉಪಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
