ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ನಂದಿಗದ್ದೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅವುರ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ನಂದಿಗದ್ದೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ರ ದಿನಾಂಕ:23-11-2026, ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

 

ವೇದಿಕೆಯ ಸಭಾ ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಗೆ ಗಣ್ಯರನ್ನು ನಂದಿಗದ್ದೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವಕರರವರು ಆಮಂತ್ರಿಸಿದರು.ನಂತರ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ,ಸ್ವಾಗತ ಗೀತೆ ಹಾಡಿದರು.ಅವುರ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬೀರಪ್ಪ ಉರ್ಮಿಯವರು ಸ್ವಾಗತ ಭಾಷಣದ ಮೂಲಕ ಉಪಸ್ಥಿತರಿದ್ದ ವೇದಿಕೆಯ ಮೇಲಿನ ಗಣ್ಯರಿಗೆ ವಿದ್ಯಾರ್ಥಿಗಳಿಂದ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ನಂದಿಗದ್ದೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವಕರರವರು ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶ, ಆಯೋಜನೆ,ರೂಪುರೇಷ,ಇಲಾಖೆಯ ಸಹಕಾರ, ಸಮುದಾಯದವರ ಸಹಭಾಗಿತ್ವದ ಕುರಿತು ವಿವರವಾಗಿ ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಉಪಸ್ಥಿತರಿದ್ದ ಗಣ್ಯರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸುರೇಶ ದಾನಗೇರಿಯವರು ತಮ್ಮ ತಂದೆಯವರು, ಸಹೋದರು ಶಾಲೆಗೆ ಜಾಗದ ಅವಶ್ಯಕತೆ ಇದ್ದಾಗ,ಅಂದಿನ ಸಿದ್ಧಾಪುರದ ಶಿಕ್ಷಕರ ಕೋರಿಕೆಯಂತೆ ಭೂದಾನವನ್ನು ಮಾಡಿರುತ್ತಿದ್ದು,ಅವರ ಪ್ರಯತ್ನದಿಂದ ಹಂತ-ಹಂತವಾಗಿ ಕಟ್ಟಡಗಳು,ಕಾಂಪೌಂಡಗಳು ನಿರ್ಮಾಣಗೊಂಡು ಅಂದಿನಿಂದ ಇಂದಿನವರೆಗೆ ಅನೇಕ ರೀತಿಯ ಅಭಿವೃದ್ಧಿಯ ಕಾರ್ಯಗಳು ಆಗಿರುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಯನ್ನು ದತ್ತು ಪಡೆದಿರುವ ಪ್ರೇರಣಾ ಸಂಸ್ಥೆಯ ಅಡಿಯಲ್ಲಿ ಇನ್ನೂ ಅಭಿವೃದ್ಧಿಯ ಕಾರ್ಯಗಳು ನಡೆಯಲಿ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೇರಣಾ ಸಂಸ್ಥೆಯ ಅಧ್ಯಕ್ಷರಾದ ಸುಕನ್ಯಾ ದೇಸಾಯಿ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿರುವ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಇರುವಂತಹ ವೇದಿಕೆ.ಕಾರ್ಯಕ್ರಮದ ಆಯೋಜಕರು ಉತ್ತಮ ರೀತಿಯಲ್ಲಿ ಸಂಘಟನೆಯನ್ನು ಮಾಡಿರುತ್ತಿದ್ದು,ಮೆಚ್ಚುಗೆಯನ್ನು ವ್ಯಕ್ತಪಡಿಸಿ ಈಗಾಗಲೇ ನಮ್ಮ ಪ್ರೇರಣಾ ಸಂಸ್ಥೆಯವರು ಅವುರ್ಲಿ ಶಾಲೆಯನ್ನು ಅಭಿವೃದ್ಧಿಯ ದೃಷ್ಟಿಯಿಂದ ದತ್ತು ಪಡೆದಿದ್ದು ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಾಧ್ಯವಾದಷ್ಟು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಮಾಡೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿಗಳಾದ ನಂದಿಗದ್ದೆ ಗ್ರಾಮ ಪಂಚಾಯತದ ಮಾಜಿ ಸದಸ್ಯರಾದ ಧವಳೋ ಗಣೇಶ ಸಾವರ್ಕರ ಮಾತನಾಡಿ ಅವುರ್ಲಿ ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಶಾಲೆಯ ಆರಂಭದ ದಿನದಿಂದ ಇಲ್ಲಿಯವರೆಗಿನ ಹಾಗೂ ಮುಂದಿನ ತಲೆಮಾರಿನವರೆಗೂ ಶ್ರಮಿಸುವ ಎಲ್ಲರನ್ನು ಸ್ಮರಿಸುವುದು ಮುಖ್ಯ. ಶಾಲೆಯು ಐವತ್ತು ವರ್ಷಗಳ ಸುದೀರ್ಘ ಪಯಣದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದೆ.ಅನ್ನದಾನವನ್ನು ಮಾಡಿ ಒಂದೆರಡು ದಿನ ತೃಪ್ತಿ ಪಡಿಸಬಹುದು.ಆದರೆ ವಿದ್ಯಾ ದಾನ ಮಾಡುವುದರ ಮೂಲಕ ಜೀವನ ಪರ್ಯಂತ ಶಕ್ತಿ ಮತ್ತು ಜ್ಞಾನದ ಬೆಳಕನ್ನು ನೀಡಬಹುದು.ಸುರೇಶ ದಾನಗೇರಿಯವರ ತಂದೆಯವರು ಶಾಲೆಗೆ ಭೂದಾನದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನದ ಪುಣ್ಯದ ಕೆಲಸಕ್ಕೆ ಪಾತ್ರರಾಗಿದ್ದಾರೆ.ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ,ಪ್ರತಿಯೊಬ್ಬರಲ್ಲು ಒಂದೊಂದು ಪ್ರತಿಭೆ ಅಡಗಿರುತ್ತದೆ.ಅಡಗಿರುವ ಪ್ರತಿಭೆಯನ್ನು ಗುರುತಿಸಿ,ನಿರಂತರ ಮಾರ್ಗದರ್ಶನ,ಪ್ರೋತ್ಸಾಹ ನೀಡಿದಾಗ ಮಾತ್ರ ಆ ಸುಪ್ತ ಪ್ರತಿಭೆ ಹೊರ ಬಂದು ಸಮಾಜಕ್ಕೆ ಹಾಗೂ ಹೊರ ಜಗತ್ತಿಗೆ ಪರಿಚಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಅಪಾರವಾದ ಪ್ರತಿಭೆ ಹಾಗೂ ಸೃಜನಶೀಲತೆ ಅಡಗಿದೆ.ಪ್ರತಿಭೆಯನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕರಲ್ಲಷ್ಟೇ ಅಲ್ಲದೇ ಪಾಲಕರ ಹಾಗೂ ಸಮಾಜದ ಮೇಲಿದೆ,ಪ್ರತಿಭಾವಂತ ವಿದ್ಯಾರ್ಥಿಗೆ ಆರಂಭಿಕ ಹಂತದಲ್ಲಿ ಸೂಕ್ತ ಮಾರ್ಗದರ್ಶನ,ಪ್ರೋತ್ಸಾಹ ದೊರೆತಲ್ಲಿ ಹೆಚ್ಚಿನ ಸಾಧನೆ ಮಾಡಬಹುದು,ಶಿಕ್ಷಣ ಇಲಾಖೆಯ ಹಾಗೂ ಸಮುದಾಯದ ಸಹಭಾಗಿತ್ವ ಇದ್ದಲ್ಲಿ ಯಾವುದೇ ಕಾರ್ಯಕ್ರಮದಲ್ಲಿಯೂ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅತಿಥಿ ಉಪನ್ಯಾಸಕ ಸುನಿಲ ಶೇಟಕರ ಶಿಕ್ಷಕರ ಕುರಿತು, ಶಾಲೆ,ದೇವಸ್ಥಾನದ ಅಭಿವೃದ್ಧಿ,ಊರಿನ ವಾತಾವರಣ,ಕಾರ್ಯಕ್ರಮದ ಸಂಘಟನೆ,ಸಂಘಟಕರ ಕುರಿತು ಮಾತನಾಡಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೋಮಣ್ಣಾ ವೇಳಿಪ, ಉಪಾಧ್ಯಕ್ಷರಾದ ಸುದೇಶ ಸಾವಂತ,ನಿವೃತ್ತ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ,ಸೋಮೇಶ್ವರ ದೇವಸ್ಥಾನದ ಅರ್ಚಕರಾದ ಹರಿಹರ ಭಟ್ಟ,ಪರಿಸರ ಅಭಿವೃದ್ಧಿ ಸಮಿತಿ ಅವುರ್ಲಿಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ,ಶಿಕ್ಷಕರಾದ ಶಶಿಕಾಂತ ಸರ್,ವಿನಾಯಕ ಪಟಗಾರ, ಕ್ಲಸ್ಟರಿನ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಖಾನಗಾಂವ ಶಾಲೆಯ ಮುಖ್ಯ ಶಿಕ್ಷಕರಾದ ಶಾಂತಕುಮಾರ ಎಸ್ ಕೆ ಅವರು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರೂಪಿಸಿದರು.ನಂದಿಗದ್ದೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಭುವನೇಶ್ವರ ಮೆಸ್ತಾ ವಂದನಾರ್ಪಣೆಯನ್ನು ಸಲ್ಲಿಸಿದರು.