ಸುದ್ದಿ ಕನ್ನಡ ವಾರ್ತೆ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ವತಿಯಿಂದ ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ಭವನದ ಮೇಲಂತಸ್ತಿನ ಕಟ್ಟಡ ಉದ್ಘಾಟನೆ ಹಾಗೂ 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲ್ವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

​ಪ್ರಶಸ್ತಿ ಪುರಸ್ಕೃತರು:

  • ​ರಾಜ್ಯಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ: ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ
  • ​ಡಾ. ಯು. ಚಿತ್ತರಂಜನ್ ಪ್ರಶಸ್ತಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಜಿ.ಯು. ಭಟ್ ಹೊನ್ನಾವರ
  • ​ಕೆ. ಶ್ಯಾಮರಾವ್ ಪ್ರಶಸ್ತಿ: ಹಿರಿಯ ಪತ್ರಕರ್ತ ನರಸಿಂಹ ಸಾತೊಡ್ಡಿ
  • ​ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿ: ವರದಿಗಾರ ಮಂಜುನಾಥ ಈರಗೊಪ್ಪ

​ಪಾವಿತ್ರ್ಯ ಕಾಪಾಡಿಕೊಳ್ಳುವುದು ಅಗತ್ಯ:

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಅವರು, “ಹಣದಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬ ಮನೋಭಾವ ಬೆಳೆಯುತ್ತಿದ್ದು, ಕಾರ್ಯಾಂಗ ಮತ್ತು ಶಾಸಕಾಂಗವೂ ತನ್ನ ಪಾವಿತ್ರ್ಯ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಪೆನ್ನು ಚಿಕ್ಕದಾಗಿದ್ದರೂ ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿ ಅದಕ್ಕಿದೆ. ಇಂದಿನ ಪತ್ರಕರ್ತರು ಬರಹದ ಮೌಲ್ಯ ಮತ್ತು ಜವಾಬ್ದಾರಿಯ ಅರಿವಿನೊಂದಿಗೆ ಪತ್ರಿಕೋದ್ಯಮದ ಪಾವಿತ್ರ್ಯವನ್ನು ಕಾಪಾಡಿಕೊಂಡು ಹೋಗಬೇಕು” ಎಂದು ಕಿವಿಮಾತು ಹೇಳಿದರು.

​ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವಾಗಲಿ:

ಮೇಲಂತಸ್ತಿನ ಕಟ್ಟಡ ಕಾಮಗಾರಿ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, “ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಇಂದಿನ ಪತ್ರಿಕಾರಂಗದ ಪೆನ್ನು ಮೊಂಡಾಗದೆ, ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಮುನ್ನಡೆಯಬೇಕು” ಎಂದರು.

​ಟೀಕೆಗಳನ್ನು ಸಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು:

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, “ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರಗಳೆರಡೂ ಸಾರ್ವಜನಿಕ ಬದುಕಿನೊಂದಿಗೆ ನೇರ ಸಂಬಂಧ ಹೊಂದಿವೆ. ಸಾರ್ವಜನಿಕ ಜೀವನದಲ್ಲಿರುವವರು ಟೀಕೆಗಳನ್ನು ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ಟೀಕೆಗಳು ನಮಗೆ ದಿಕ್ಕು ತೋರುವ ಆದರ್ಶವಾಗಬೇಕು. ಖಾದ್ರಿ ಶಾಮಣ್ಣನವರು ರಾಮಕೃಷ್ಣ ಹೆಗಡೆಯವರ ಸ್ನೇಹಿತರಾಗಿದ್ದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಟೀಕಿಸುವುದನ್ನು ಎಂದಿಗೂ ಬಿಟ್ಟಿರಲಿಲ್ಲ. ಸತ್ಯವನ್ನು ನಿರ್ಭೀತಿಯಿಂದ ಪ್ರತಿಪಾದಿಸುವ ಪತ್ರಿಕಾಧರ್ಮ ಅವರಲ್ಲಿತ್ತು. ಆದರೆ ಈಗಿನ ದಿನಮಾನಗಳಲ್ಲಿ ಅದರ ಹರಿತ ಕಡಿಮೆಯಾಗಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟರು.

​ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಜಿ.ಯು. ಭಟ್ ಹೊನ್ನಾವರ, ನರಸಿಂಹ ಸಾತೊಡ್ಡಿ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಭಟ್ಕಳ ಅರ್ಬನ್ ಕೋ-ಆಪ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಶ ಎಂ. ಶೆಟ್ಟಿ ಮಾತನಾಡಿದರು.

​ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ:

ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಮಾತನಾಡಿ, “ಪತ್ರಿಕಾ ಮಂಡಳಿ ಯಾರೊಬ್ಬರ ಸ್ವತ್ತಲ್ಲ. ನೀತಿ-ನಿಯಮದ ಪ್ರಕಾರ ನಡೆದುಕೊಳ್ಳುವುದರಿಂದ ದೀರ್ಘಕಾಲದ ಹೋರಾಟದ ಫಲವಾಗಿ ಮಂಡಳಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಮುಂದೆಯೂ ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ” ಎಂದರು.

​ವೇದಿಕೆಯಲ್ಲಿ ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಉಪಸ್ಥಿತರಿದ್ದರು. ರಾಧಾಕೃಷ್ಣ ಭಟ್ಕಳ ಸ್ವಾಗತಿಸಿದರು. ದತ್ತಾತ್ರಯ ಜಣ್ಣಿಪಾಲ್ ಹಾಗೂ ಸುಮಂಗಲಾ ಹೊನ್ನೆಕೊಪ್ಪ ಸನ್ಮಾನಪತ್ರ ವಾಚಿಸಿದರು. ನಾಗರಾಜ ಭಟ್ಟ ಕೆಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರೆ, ಶಿವಪ್ರಸಾದ ಹಿರೇಕೈ ವಂದಿಸಿದರು.

​ಕಾರ್ಯಕ್ರಮದಲ್ಲಿ ಅರಣ್ಯ ಹಕ್ಕು ಹೋರಾಟಗಾರ ಎ. ರವೀಂದ್ರನಾಥ ನಾಯ್ಕ, ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ, ಆರ್.ಡಿ. ಹೆಗಡೆ, ಪ್ರಮುಖರಾದ ಪ್ರದೀಪ ಶೆಟ್ಟಿ, ದೀಪಕ್ ದೊಡ್ಡೂರು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಪತ್ರಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.