ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕಿನ ಬುಡಕಟ್ಟು ಕುಣಬಿಗಳ ಕಂಬಳಿ ಹರಕೆ ಪ್ರೀಯ ಖಾಪ್ರಿ ದೇವರ ಜಾತ್ರಾ ಮಹೋತ್ಸವ ರವಿವಾರ ನವೆಂಬರ 22 ರಂದು ಜೊಯಿಡಾ ಕೇಂದ್ರದ ಗಾವಡೆವಾಡಾದಲ್ಲಿ ನಡೆಯಲಿದೆ.

ದೇಹ ತುಂಬ ಕಂಬಳಿ, ಅದರ ಮೇಲೆ ಗೊಂಡೆ ಹೂವಿನ ಮಾಲೆ, ತಲೆಗೆ ಮುಂಡಾಸೊ, ಸೊಂಟಕ್ಕೆ ಗಂಟೆ, ಕೈಯಲ್ಲಿ ಒನಕೆ ಹಿಡಿದು ಯಾರಿಗೂ ಎಲ್ಲೂ ದೇಹ ಕಾಣದೇ ಗಾವಡೇವಾಡಾ ದೇವರ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆಯ ಸುತ್ತಲೂ, ಡೊಲು, ಕಂಸಾಳೆ ಮತ್ತು ಜಾನಪದ ಸಾಂಪ್ರದಾಯಿಕ ಹಾಡಿನ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಖಾಪ್ರಿ, ಜನ್ಮಿ ದೇವರ ಜಾತ್ರಾ ಮಹೋತ್ಸವ ಪ್ರತಿವರ್ಷದಂತೆ ವಿಜ್ರಂಭಣೆಯಿಂದ ನಡೆಯಲು ಗಾವಡೇವಾಡಾದಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ.

ಕುರಿ, ಕೊಳಿ, ಕಾಯಿ, ಸಾರಾಯಿ, ಕಲ್ಲು, ಮರದಟೊಂಗೆ, ಗಂಟೆ ಹರಕೆ ಪಡೆಯುವ ದೇವರು ಕೇಳಿದ್ದೇವೆ. ಆದರೆ ಗಾವಡೆವಾಡಾ ಖಾಪ್ರಿ ದೇವರಿಗೆ ಕಂಬಳಿ ಹರಕೆ ಇಷ್ಟದಾಯಕವಾಗಿದೆ. ಹೀಗಾಗಿ ಟ್ರಕ್ ಗಟ್ಟಲೆ ಕಂಬಳಿ ಗಳ ರಾಶಿ ಜೊಯಿಡಾ ಶಿವಾಜಿ ಸರ್ಕಲ್ ದಲ್ಲಿ ಕಾಣಬಹುದಾಗಿದೆ.

ಶ್ರೀ ಶಿವದೇವನ ಸಾಕ್ಷಾತ್ ಅವತಾರವೇ ಖಾಪ್ರಿ ದೇವರ ಅವತಾರ ಎನ್ನುತ್ತಾರೆ. ದೇವರ ಅವತಾರವೇ ದೇವತಾರ ಎಂದು ಬುಡಕಟ್ಟು ಕುಣಬಿಗಳು ನಂಬಿರುತ್ತಾರೆ. ಹೀಗಾಗಿ ಖಾಪ್ರಿ ದೇವರನ್ನು ದೇವತಾರ ಎಂದು ಕರೆಯಲಾಗುತ್ತದೆ. ಕುಣಬಿ ಗಳಲ್ಲಿ ದೇವತಾರಗಳಿಗೆ ಹಲವು ಹೆಸರುಗಳಿವೆ. ಗಾಂಗೋಡಾದಲ್ಲಿ ಕಾಳ, ತೆಲೋಲಿ, ಖಾನಗಾಂವ, ಸಿಸೈ, ಕೇಲೋಲಿ ಗ್ರಾಮದಲ್ಲಿ ಪೈಕ್ ದೇವತಾರ ಹೆಸರಿನಿಂದ ಪ್ರಸಿದ್ದಿ ಪಡೆದಿದೆ, ಕುಂಡಲ ಜಟಾಸೂರ, ಕುರಾವಲಿ ಬಾಗೇಲಿಪೈಕ್ ಹೀಗೆ ಬೇರೆ ಬೇರೆ ಗ್ರಾಮಗಳಲ್ಲಿ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಈ ದೇವತಾರಗಳಿಗೆ ದೇವಾಲಯ ಇರುವುದಿಲ್ಲ. ಗಾವಡೆವಾಡಾ ಖಾಪ್ರಿ ದೇವತಾರ ದುರ್ಗ ಎಂಬ ಪ್ರದೇಶದಲ್ಲಿ ಫಿಡಗುಸ್ ಮರದ ಮೇಲೆ ವಾಸ ಮಾಡುತ್ತಿರುವ ಬಗ್ಗೆ ನಂಬಿಕೆ ಇದೆ. ಇಲ್ಲಿ ಯಾರು ಹೋಗದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಅನೇಕ ದೇವತಾರಗಳು ಗುಹೆ, ಗುಡ್ಡದ ಮೇಲೆ, ಮರದ ಪೊಟರೆ ವಾಸವಾಗಿದ್ದ ಬಗ್ಗೆ ನಂಬಿಕೆ ಕುಣಬಿ ಗಳಲ್ಲಿ ಬೆಳೆದು ಬಂದಿದೆ.

ಪ್ರತ್ಯಕ್ಷ ಕಾಣಸಿಗುವ ಏಕೈಕ ದೇವತಾರ.

ಬುಡಕಟ್ಟು ಕುಣಬಿ ದೇವತಾರ ಗಳಿಗೆ ನಿರ್ದಿಷ್ಟವಾದ ಆಕಾರ ಇರುವುದಿಲ್ಲ. ಆದರೆ ಗಾವಡೆವಾಡಾ ಖಾಪ್ರಿ ದೇವರಿಗೆ ನಿರ್ದಿಷ್ಟವಾದ ಜಾಗೆ ಮತ್ತು ಆಕಾರ ಇರುವುದು ಮತ್ತು ಜಾತ್ರೆ ದಿವಸ ಭಕ್ತರಿಗೆ ಪ್ರತ್ಯಕ್ಷ ಕಾಣಸಿಗುವುದರಿಂದ ಕುಣಬಿ ಗಳಲ್ಲಿ ಗಾವಡೆವಾಡಾ ಖಾಪ್ರಿ ದೇವತಾರ ಜಾತ್ರೆ ಇಷ್ಟೊಂದು ಪ್ರಸಿದ್ಧಿ ಪಡೆಯಲು ಕಾರಣವಾಗಿದೆ.

ಜಾನಪದ ಸೊಗಡಿನ ಜಾತ್ರೆ.
ದ್ವಾದಶಿ ತುಳಸಿ ವಿವಾಹ ಮಾರನೇಯ ದಿನ ಗಾವಡೇವಾಡಾದಲ್ಲಿ ನಡೆಯುವ ಖಾಪ್ರಿದೇವತಾರ ಜಾತ್ರೆ ಸಂಪೂರ್ಣ ಜಾನಪದ ಸೊಗಡಿನ ಜಾತ್ರೆಯಾಗಿದೆ. ಕುಣಬಿಗಳ ಬುಧವಂತನೇ ಮಾತ್ರ ದೇವರಿಗೆ ಪೂಜೆ ಮಾಡುತ್ತಾರೆ. ಬೇರೆ ಯಾರು ಕೂಡ ದೇವರಿಗೆ ಸ್ಪರ್ಶ ಮಾಡುವಂತಿಲ್ಲ. ಯಾರಾದರೂ ಕುಣಬಿ ಸಾಂಪ್ರದಾಯದ ವಿರುದ್ಧ ನಡೆದರೆ ಅಪಶಕುನ ನಡೆದ ಅನೇಕ ಜೀವಂತ ಉದಾಹರಣೆ ಇದೆ. ಅಂದು ಬೆಳಿಗ್ಗೆಯಿಂದ ಮಧ್ಯಾಹ್ನ ಖಾಪ್ರಿ ದೇವರು ತುಳಸಿ ಕಟ್ಟೆಯ ಸುತ್ತಲೂ ಪ್ರದಕ್ಷಿಣೆ ಹಾಕಿ ಹೋಗುವ ತನಕ ಬುಡಕಟ್ಟು ಸಾಂಪ್ರದಾಯದಂತೆ ಜಾನಪದ ಸೊಗಡಿನ ಹಾಡುಗಳು ಸದ್ದು ಕೆಳಿ ಬರುತ್ತದೆ.

ಸೀಮೆಯ ಒಳಗಿನ ಸರ್ವ ಕಾಯುವ ದೇವತಾರ.

ಖಾಪ್ರಿ ದೇವರ ಜಾತ್ರಾಯ ಮೊದಲ ರಾತ್ರಿ ಯಾರು ಕೂಡ ಗಾವಡೆವಾಡಾ ಗ್ರಾಮದ ಸೀಮೆಯ ಒಳಗಿನ ರೈತರು ಭತ್ತ ಕಾಯಲು ರಾತ್ರಿ ಮಾಳೆಗೆ ಹೋಗುವುದಿಲ್ಲ. ಖಾಪ್ರಿ ದೇವರು ಭತ್ತ, ದನಕರುಗಳು, ರೋಗ ರುಜಿನಗಳು ಬರದಂತೆ, ಆರೋಗ್ಯ ದಯಪಾಲಿಸುವ ದೇವತಾರ ಎಂಬ ಬಲವಾದ ನಂಬಿಕೆ ಇದೆ. ಇದು ದೇವತಾರಾಧನೆಯ ಜಾತ್ರೆಯಾಗಿದೆ.

ಕಂಬಳಿ ಮಹತ್ವ ಏಕೆ

ಖಾಪ್ರಿ ದೇವತಾರ ಎಂದರೆ ಪೂರ್ವಜರ ಎರಡು ಆತ್ಮಗಳು. ದೇಹದ ಭಾಗ ಎಲ್ಲು ಕಾಣದಂತೆ ಕರಿ ಕಂಬಳಿ ಸುತ್ತಲಾಗುತ್ತಿದೆ. ಈ ದೇವತಾರಗಳೂ ಕುಟುಂಬದ ಇಬ್ಬರ ಮೈಮೇಲೆ ಬಂದು ಆತ್ಮಗಳ ಮುಖ ಕಾಣಬಾರದೆಂದು ಕಂಬಳಿ ಸುತ್ತಲಾಗುತ್ತದೆ. ಈ ಕಂಬಳಿ ಖಾಪ್ರಿ ದೆವರ ಹರಕೆ ಆಗಿದೆ. ಇದಕ್ಕಾಗಿ ಕಂಬಳಿಗೆ ಬಲು ಬೇಡಿಕೆ ಇದೆ.

ನವೆಂಬರ್ 22 ರವಿವಾರ ಖಾಪ್ರಿ ಜಾತ್ರೆ.

ಪ್ರತಿವರ್ಷದಂತೆ ಬುಡಕಟ್ಟು ಕುಣಬಿಗಳ ಜೊಯಿಡಾ ಗಾವಡೇವಾಡಾದಲ್ಲಿ ಖಾಪ್ರಿ ದೇವರ ಜಾತ್ರೆ ನಡೆಯಲಿದೆ. ಬರುವ ಭಕ್ತಾದಿಗಳು ಶಾಂತತೆಯನ್ನು ಕಾಪಾಡಬೇಕು ಮತ್ತು ದೇವರ ಕೃಪೆಗೆ ಪಾತ್ರರಾಗಬೇಕು ಎಂದು
ಬುದವಂತ ನಾರಾಯಣ ಗಾವಡಾ, ಮಿರಾಶಿ ವಿನೋದ್, ಪ್ರಮುಖ ಪಾಪು ಗಾವಡಾ ವಿನಂತಿಸಿದ್ದಾರೆ.