ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ ಗಂಗಾವಳಿ ನದಿಯಲ್ಲಿ ಕೇಂದ್ರ ಜಲ ಆಯೋಗದ ಯಾವುದೇ ಹೈಡ್ರೋಲಾಜ್ಜಿಕಲ್ ಅಬ್ಸರ್ವೇಷನ್ ಕೇಂದ್ರಗಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಬೇಡ್ತಿ ಗಂಗಾವಳಿ ನದಿಯಲ್ಲಿ ಕೇಂದ್ರ ಜಲ ಆಯೋಗದ ಯಾವುದೇ ಹೈಡ್ರೋಲಾಜಿಕಲ್ ಅಬ್ಸರ್ವೇಷನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ಜಲ ಶಕ್ತಿ ಸಚಿವಾಲಯವು ಸ್ಪಷ್ಟಪಡಿಸಿದೆ.

ಶಿರಸಿಯ ದೇವಿ ಕರೆಯ ನಿವಾಸಿ ಡಾ. ರವಿಕಿರಣ್ ಪತವರ್ಧನ್ ರವರು ಸಲ್ಲಿಸಿದ್ದ ಸಾರ್ವಜನಿಕ ಕುಂದು ಕೊರತೆ ಅರ್ಜಿಗೆ ಉತ್ತರವಾಗಿ ಕೇಂದ್ರ ಜಲ ಆಯೋಗದ ನದಿ ಅಂಕಿ ಅಂಶ ಸಂಕಲನ -1 ನಿರ್ದೇಶನಾಲಯವು ಈ ಅಧಿಕೃತ ಪತ್ರ ನೀಡಿದೆ.

ಈ ಪತ್ರದಲ್ಲಿ ಏನಿದೆ….?
ದಿನಾಂಕ 5.11.2026ರಂದು ಹೊರಡಿಸಲಾದ ಈ ಪತ್ರದಲ್ಲಿ ಹೈಡ್ರೋಲಾಜಿಕಲ್ ಡೇಟಾ ಹಂಚಿಕೆಗಾಗಿ ರಾಷ್ಟ್ರೀಯ ಜಲ ಡೇಟಾ ನೀತಿ 2026 ಅನ್ನು ಅನುಸರಿಸಲು ಸಲಹೆ ನೀಡಲಾಗಿದೆ.

ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಗಂಗಾವಳಿ ನದಿ ವ್ಯಾಪ್ತಿಯಲ್ಲಿ ಕೇಂದ್ರ ಜಲ ಆಯೋಗದ ಯಾವುದೇ ಎಚ್ ಓ ಸೈಟ್ಗಳು ಇಲ್ಲ ಎಂಬುದನ್ನು ಆಯೋಗದ ಉಪನಿರ್ದೇಶಕನಾದ ಎನ್ ಜಿತೇನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಈ ಪತ್ರವನ್ನು ಕೇಂದ್ರ ಜಲ ಆಯೋಗದ ಮುಖ್ಯ ಅಭಿಯಂತರರು ಸೇರಿದಂತೆ ಸಂಬಂಧ ಪಟ್ಟ ನಿರ್ದೇಶನಾಲಯಗಳಿಗೆ ಮಾಹಿತಿಗಾಗಿ ಪ್ರವಾನಿಸಲಾಗಿದೆ. ಈ ಉತ್ತರವು ಉತ್ತರ ಕನ್ನಡ ಜಿಲ್ಲೆಯ ನದಿ ಜೋಡಣೆ ಹಾಗೂ ಜಲಸಂಪನ್ಮೂಲ ಯೋಜನೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ತಾಂತ್ರಿಕ ಮಾಹಿತಿಯಾಗಿದೆ.