ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡ)ಗ್ರಾಮ ಪಂಚಾಯತದ ವ್ಯಾಪ್ತಿಯ ಕಾಳಸಾಯಿಯಲ್ಲಿ ತೋಟಗಾರಿಕಾ ಇಲಾಖೆ ಉತ್ತರಕನ್ನಡ,ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು,ಜೋಯಿಡಾ,ಹಾಗೂ ಸ್ಕೊಡ್ ವೆಸ್ ಸಂಸ್ಥೆ ಶಿರಸಿ ಸಹಯೋಗದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಜೇನು ಕೃಷಿಯ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಜೋಯಿಡಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಯಲ್ಲಾರಲಿಂಗ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಹಾಗೂ ಜೇನು ಕೃಷಿಯ ತರಬೇತಿ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜೇನು ಕೃಷಿಕ ಗುರುರಾಜ ಹೆಗಡೆಯವರು ಜೋಯಿಡಾ ತಾಲೂಕನ್ನು ಸಾವಯವ ತಾಲೂಕನ್ನಾಗಿ ಘೋಷಿಸಿದ್ದು, ಜೇನು ಕೃಷಿಯನ್ನು ಮಾಡಲು ಉತ್ತಮ ಪರಿಸರ,ವಿಪುಲ ಅವಕಾಶವಿದ್ದು,ಪರ್ಯಾಯ ಕೃಷಿಯ ಮಾರ್ಗವನ್ನಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಜೇನು ಕೃಷಿಕರಾದ ಗುರುರಾಜ ಹೆಗಡೆ ಮತ್ತು ಭಾರ್ಗವ ಹೆಗಡೆ ಜೇನು ಕೃಷಿ,ಜೇನು ಗೂಡು,ಜೇನು ಹುಳುಗಳ ವಿಧ,ಅವುಗಳ ಕಾರ್ಯ,ಕೃತಕ ಆಹಾರ,ಗೂಡುಗಳ ಸ್ವಚ್ಛತೆ ಮತ್ತು ಗೂಡುಗಳ ವಿಭಜನೆ ಸೇರಿದಂತೆ ಜೇನು ಕೃಷಿಯಲ್ಲಿ ಬರುವ ವಿವಿಧ ಪ್ರಕಾರಗಳನ್ನು ವಿವರವಾದ ಉಪಯುಕ್ತ ಮಾಹಿತಿಗಳನ್ನು ನೀಡಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಕೊಡ್ ವೆಸ್ ಸಂಸ್ಥೆಯ ವಿನಾಯಕ ಪೈಯವರು ತರಬೇತಿಯ ಉದ್ದೇಶದ ಕುರಿತು ಮಾತನಾಡಿದರು. ತರಬೇತಿಯ ಕಾರ್ಯಕ್ರಮ ಆಯೋಜಿಸಲು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಸುಭಾಸ ನಾಯ್ಕ, ಕೊಂದರ ಹಾಗೂ ಗುರು ಉಳವಿ,ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದರು. ತರಬೇತಿಯ ಕಾರ್ಯಾಗಾರದಲ್ಲಿ ನೂರಾರು ಸಂಖ್ಯೆಯಲ್ಲಿ ಪುರುಷ-ಮಹಿಳೆ ರೈತ ಬಾಂಧವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತರಬೇತಿ ಕಾರ್ಯಾಗಾರ ಸ್ಥಳದ ಹತ್ತಿರದ ಭತ್ತದ ಗದ್ದೆಗೆ ಬೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿ ಉಪಯುಕ್ತ ಮಾಹಿತಿ ಸಂವಾದ ನಡೆಯಿತು.
