ಸುದ್ದಿ ಕನ್ನಡ ವಾರ್ತೆ

ಶಿರಸಿ: ಪಶ್ಚಿಮ ಘಟ್ಟಗಳ ಪರಿಸರ ಮತ್ತು ನಿಸರ್ಗ ಸಂಪತ್ತನ್ನು ಸಂರಕ್ಷಿಸುವ ಸಂಕಲ್ಪದೊಂದಿಗೆ, ಬೇಡ್ತಿ (ಗಂಗಾವಳಿ) ಹಾಗೂ ಅಘನಾಶಿನಿ ನದಿಗಳ ತಿರುವು ಮತ್ತು ಜೋಡಣೆ ಯೋಜನೆಗಳನ್ನು ವಿರೋಧಿಸಿ ಗಂಗಾಷ್ಟಮಿಯ ಶುಭ ಸಂದರ್ಭದಲ್ಲಿ ನದೀ ಪೂಜೆ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸೂಚನೆಯಂತೆ ನವೆಂಬರ್ 2 ಗಂಗಾಷ್ಟಮಿಯಿಂದ ಒಂದು ವಾರದ ಅವಧಿಯಲ್ಲಿ ಬೇಡ್ತಿ (ಗಂಗಾವಳಿ), ಅಘನಾಶಿನಿ ಹಾಗೂ ಅವುಗಳ ಉಪನದಿಗಳ ದಡದಲ್ಲಿ ನದೀ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನ ಜಾಗೃತಿ ಮೂಡಿಸಲು ಕರೆ ನೀಡಲಾಗಿದೆ.
ನದಿ ತಿರುವು ಮತ್ತು ಜೋಡಣೆ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿ ಎಂದು ಪ್ರಾರ್ಥಿಸುವುದರ ಜತೆಗೆ, ನದಿಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಗ್ರಾಮಸ್ಥರು, ಮಹಿಳೆಯರು, ಯುವಕರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನದೀ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಶ್ರೀಮಠದ ವತಿಯಿಂದ ಮನವಿ ಮಾಡಲಾಗಿದೆ.
ನದೀ ಪೂಜೆಯ ಸಂದರ್ಭದಲ್ಲಿ ಪರಿಸರ ಮತ್ತು ನದಿಗಳ ಕುರಿತಾಗಿ ಶ್ರೀಮಠದಿಂದ ಬಿಡುಗಡೆಯಾಗಿರುವ ಜಾಗೃತಿ ಹಾಡುಗಳನ್ನು ಹಾಡುವ ಮೂಲಕ ಜನರಲ್ಲಿ ನದಿಗಳ ಉಳಿವಿನ ಮಹತ್ವವನ್ನು ತಿಳಿಸಬೇಕು. ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಬೇಡ್ತಿ (ಗಂಗಾವಳಿ) ನದಿ ತಿರುವು ಮತ್ತು ಜೋಡಣೆ ಯೋಜನೆಗಳನ್ನು ತಕ್ಷಣವೇ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವ ಬೃಹತ್ ಪತ್ರ ಚಳವಳಿ ಹಾಗೂ ಸಹಿ ಸಂಗ್ರಹ ಅಭಿಯಾನಕ್ಕೂ ನದೀ ಪೂಜೆಯ ಸಂದರ್ಭದಲ್ಲಿ ಉತ್ತೇಜನ ನೀಡುವಂತೆ ಕರೆ ನೀಡಲಾಗಿದೆ.
ನದಿ ಪೂಜೆಯ ಸಂದರ್ಭದಲ್ಲಿ ‘ಬಿಡೆವು ಬಿಡೆವು ಬೇಡ್ತಿ ಬಿಡೆವು, ಕೊಡೆವು ಕೊಡೆವು ಅಘನಾಶಿನಿ ಕೊಡೆವು’, ‘ನದಿ ಉಳಿಸಿ ನಾಡು ಉಳಿಸಿ’, ‘ಗಂಗಾವಳಿ ಉಳಿಸಿ ಕರಾವಳಿ ಬೆಳೆಸಿ’, ‘ಉಳಿಸಿ ಉಳಿಸಿ ಪಶ್ಚಿಮ ಘಟ್ಟ ಉಳಿಸಿ’, ‘ಉತ್ತರ ಕನ್ನಡ ಉಳಿಸಿ’ ಸೇರಿದಂತೆ ನದಿ ಸಂರಕ್ಷಣೆಯ ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಲು ಕರೆ ನೀಡಲಾಗಿದೆ. ಮಾಧ್ಯಮಗಳಲ್ಲೂ ಈ ವಿಷಯ ಪ್ರಕಟಿಸಿ ಇನ್ನುಳಿದವರಿಗೂ ಈ ನಿಟ್ಟಿನಲ್ಲಿ ಜಾಗೃತಿಗೆ ಪ್ರೇರಣೆ‌ ನೀಡುವಂತೆ ಆಗಬೇಕು.
ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಯೊಂದಿಗೆ ನದಿಗಳ ಉಳಿವಿನ ಹೋರಾಟವನ್ನು ಬಲಪಡಿಸುವ ಈ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಿ, ಪವಿತ್ರ ನದಿಗಳನ್ನು ಉಳಿಸಿ ನಾಡಿನ ಪರಿಸರ ಮತ್ತು ನಿಸರ್ಗ ಸಂಪತ್ತನ್ನು ಸಂರಕ್ಷಿಸಬೇಕಾಗಿದೆ ಎಂದು ಶ್ರೀಮಠದ ವತಿಯಿಂದ ಪ್ರಕಟನೆ ಮೂಲಕ ಮನವಿ ಮಾಡಲಾಗಿದೆ.