ಸುದ್ದಿ ಕನ್ನಡ ವಾರ್ತೆ
ಶಿರಸಿ: ಕಸ್ತೂರಿರಂಗನ್ ವರದಿ ಜಾರಿಯಿಂದ ಉತ್ತರ ಕನ್ನಡದ ಹೆಚ್ಚಿನ ಪ್ರದೇಶಗಳು ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುವ ಆತಂಕದ ಹಿನ್ನೆಲೆಯಲ್ಲಿ ಅರಣ್ಯ ಅತಿಕ್ರಮಣದಾರರ ರಾಜ್ಯ ವೇದಿಕೆಯ ಮುಖ್ಯಸ್ಥ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿ, ಸುದೀರ್ಘವಾಗಿ ಸಂವಾದ ನಡೆಸಲಾಯಿತು.
ಸೋಮವಾರ ಸಂಸದರ ಕಚೇರಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಕಾಗೇರಿ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಸೇರಿದಂತೆ ಜಿಲ್ಲೆಯ ಜನರ ಹಿತಾಸಕ್ತಿ ವಿಚಾರದಲ್ಲಿ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಎಲ್ಲ ಆಯಾಮಗಳಲ್ಲೂ ಚರ್ಚೆ ನಡೆಸಿ, ವಾಸ್ತವಾಂಶ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಹಸಿರು ಕಾಣುವ ಪ್ರತಿಯೊಂದು ಪ್ರದೇಶವನ್ನೂ ಅರಣ್ಯ ಎಂದು ಪರಿಗಣಿಸುವುದು ಸರಿಯಲ್ಲ. ಅರಣ್ಯ ಸಂರಕ್ಷಣೆಯ ಜತೆಗೆ ಜನರ ಬದುಕಿಗೂ ಸಮಾನ ಮಹತ್ವ ನೀಡಬೇಕು. ಕಂದಾಯ ಭೂಮಿ, ಅರಣ್ಯ ಭೂಮಿ ಹಾಗೂ ಅತಿಕ್ರಮಣದ ವಾಸ್ತವ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಕಾಗೇರಿ ಹೇಳಿದರು.
ಕಸ್ತೂರಿರಂಗನ್ ವರದಿ ಕುರಿತು ಇನ್ನಷ್ಟು ಚರ್ಚೆ ಅಗತ್ಯವಿದ್ದು, ಜನರ ಅಭಿಪ್ರಾಯ ಮತ್ತು ಸ್ಥಳೀಯ ವಾಸ್ತವಾಂಶಗಳನ್ನು ಪರಿಗಣಿಸಲು ಕಾಲಾವಕಾಶ ಬೇಕಿದೆ. ಅರಣ್ಯ ಇಲಾಖೆಯ ಕ್ರಮಗಳಿಂದ ಜನರಿಗೆ ಅನಗತ್ಯ ಕಿರುಕುಳವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಅತಿಕ್ರಮಣದಾರರ ವೇದಿಕೆ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ದೇಶದ ಆರು ರಾಜ್ಯಗಳ ಪೈಕಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಪ್ರದೇಶಗಳು ಅರಣ್ಯ ಸೂಕ್ಷ್ಮತೆಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಲ್ಪಟ್ಟಿವೆ. ಇದರಿಂದ ಜನರ ಬದುಕು ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಹೇಳಿದರು.
“ಮನುಷ್ಯರು ಏನೂ ಅಲ್ಲ, ಅರಣ್ಯವೇ ಸರ್ವಸ್ವ ಎಂಬ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಾರದು. ಜನವಸತಿ, ಕೃಷಿ ಹಾಗೂ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅರಣ್ಯ ಸಂರಕ್ಷಣೆ ಮತ್ತು ಜನರ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಭೌತಿಕ ಸರ್ವೆ ನಡೆಸದೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಬಾರದು” ಎಂದು ಅವರು ಒತ್ತಾಯಿಸಿದರು.
ಸರ್ಕಾರಕ್ಕೆ ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಮಾಹಿತಿ ಹಾಗೂ ಸಲಹೆಗಳನ್ನು ನೀಡಲಾಗಿದೆ. ಮುಂದಿನ ಹಂತದಲ್ಲಿ ಏನು ಕ್ರಮ ಕೈಗೊಳ್ಳಬೇಕು, ಸ್ಥಳೀಯ ವಾಸ್ತವಾಂಶಗಳನ್ನು ಹೇಗೆ ಪರಿಗಣಿಸಬೇಕು ಹಾಗೂ ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ಕಂಡುಕೊಳ್ಳುವ ಕುರಿತು ಸಂಸದರ ಗಮನಕ್ಕೆ ತರಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ದಾಖಲೆಗಳ ಆಧಾರದ ಮೇಲೆ ಸಮಗ್ರ ಪರಿಶೀಲನೆ, ಭೌತಿಕ ಸರ್ವೆ ಹಾಗೂ ಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು ಎಂದು ವೇದಿಕೆ ಮನವಿ ಮಾಡಿತು.
