ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೈಕ್ ಮೇಲೆ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪಟ್ಟಣದ ಬಿಸಗೋಡ ಕ್ರಾಸ್ ಬಳಿ ವಶಕ್ಕೆ ಪಡೆದಿದ್ದಾರೆ.
ಮಾಗೋಡಿನ ನಾಗೇಂದ್ರ ಮಂಜುನಾಥ ಸಿದ್ದಿ, ಅಂಕೋಲಾ ತಾಲೂಕಿನ ಕರ್ಮಣೀಯ ರವಿ ಕೃಷ್ಣ ಸಿದ್ದಿ, ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ದಿ ಹಾಗೂ ಲಕ್ಷ್ಮಣ ಪ್ರಭಾಕರ ಸಿದ್ದಿ ಬಂಧಿತರು. ವಜ್ರಳ್ಳಿಯ ಸತೀಶ ಸಿದ್ದಿ ತಲೆ ಮರೆಸಿಕೊಂಡಿದ್ದಾನೆ.
ಇವರು ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಟಾವಣೆ ಮಾಡಿ ತುಂಡುಗಳಾಗಿ ತಯಾರಿಸಿ ಹಣದ ಆಸೆಗಾಗಿ ಮಾರಾಟ ಮಾಡುವ ಪ್ರವೃತ್ತಿ ಹೊಂದಿದವರು. ಅಕ್ರಮವಾಗಿ ಬೈಕ್ ಮೇಲೆ ಗಂಧದ ತುಂಡುಗಳನ್ನು ಸಾಗಿಸುವಾಗ ದಾಳಿ ನಡೆಸಿದಾಗ ನಾಲ್ವರು ಸಿಕ್ಕಿ ಬಿದ್ದಿದ್ದಾರೆ. ಓರ್ವ ನಾಪತ್ತೆಯಾಗಿದ್ದಾನೆ.
ಬಂಧಿತರಿಂದ ಸಿಪ್ಪೆ ತೆಗೆದ ಶ್ರೀಗಂಧದ 12 ತುಂಡುಗಳು, ಸಿಪ್ಪೆ ಸಹಿತ 17 ತುಂಡುಗಳನ್ನು, ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
