Banner Ad

ಸುದ್ದಿಕನ್ನಡ ವಾರ್ತೆ
Goa: ಕಳೆದ ಹಲವು ವರ್ಷಗಳಿಂದ ಗೋವಾ ಸಾಖಳಿ ಸಮೀಪದ ಪರ್ಯೆ ಶ್ರೀ ಭೂಮಿಕಾ ದೇವಿಯ ಮಹಾಜನ ಗಾಂವ್ಕರ್,ರಾಣೆ ಮತ್ತು ಮಾಜಿಕ್ ಎಂಬ ಗುಂಪುಗಳ ನಡುವೆ ಧಾರ್ಮಿಕ ಹಕ್ಕುಗಳ ವಿವಾದವಿದೆ. ದೇವಿಯ ಸಾಂಪ್ರದಾಯಿಕ ಕಾಲೋತ್ಸವ ಆಚರಣೆಯ ವೇಳೆ ಬುಧವಾರ ಈ ವಿವಾದ ಬುಗಿಲೆದ್ದಿದೆ. ಇದ್ದಕ್ಕಿದ್ದಂತೆ ಕಲ್ಲು ತೂರಾಟ ಆರಂಭಗೊಂಡು 25 ಕ್ಕೂ ಹೆಚ್ಚು ಜನರು ಮತ್ತು 15 ಕ್ಕೂ ಹೆಚ್ಚು ಪೋಲಿಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಿಗಿ ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿದ್ದು 38 ಜನರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಶ್ರೀ ಭೂಮಿಕಾ ದೇವಸ್ಥಾನದ ಮಹಾಜನರ ನಡುವೆ ದೇವಾಲಯದ ಹಕ್ಕುಗಳ ಬಗ್ಗೆ ತೀವ್ರ ವಿವಾದವಿದೆ. ಈ ದೇವಸ್ಥಾನದ ಕಾಲೋತ್ಸವವನ್ನು ಜನವರಿ 15 ಮತ್ತು 16 ರಂದು ಆಯೋಜಿಸಲಾಗಿತ್ತು. ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮದ ಗುಂಪಿನ ಹಕ್ಕುಗಳನ್ನು ಪುನಃ ಸ್ಥಾಪಿಸುವ ವರೆಗೂ ಕಾಲೋತ್ಸವ ಆಚರಿಸಬಾರದು ಎಂದು ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ವಿಚಾರಣೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ತೀರ್ಪು ಪ್ರಕಟಿಸಿರಲಿಲ್ಲ.

Banner Ad

ಬುಧವಾರ ಕಾಲೋತ್ಸವ ಆಚರಣೆ ಆರಂಭಗೊಂಡಾಗ ಗಾಂವ್ಕರ್ ಮತ್ತು ರಾಣೆ ಮಹಾಜನರ ಗುಂಪನ್ನು ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸದಂತೆ ಪೋಲಿಸರು ತಡೆದರು. ಆಗ ಭಕ್ತರು ಮತ್ತು ಪೋಲಿಸರ ನಡುವೆ ಘರ್ಷಣೆ ಆರಂಭವಾಯಿತು. ಆಗ ಇದ್ದಕ್ಕಿದ್ದಂತೆಯೇ ಮತ್ತೊಂದು ಗುಂಪು ಕಲ್ಲು ತೂರಾಟ ಆರಂಭಿಸಿತು ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆಯಲ್ಲಿ 25 ಕ್ಕೂ ಹೆಚ್ಚು ಭಕ್ತರು ಮತ್ತು 15 ಕ್ಕೂ ಹೆಚ್ಚು ಪೋಲಿಸರಿಗೆ ಗಾಯವಾಗಿದೆ. ಸದ್ಯ ದೇವಸ್ಥಾನದ ಪರಿಸರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿದೆ.

Banner Ad