ಸುದ್ದಿ ಕನ್ನಡ ವಾರ್ತೆ
ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ 10 ಜಿಲ್ಲೆಗಳ ಲಕ್ಷಾಂತರ ಜನರ ದೈನಂದಿನ ಜೀವನ ಹಾಗೂ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿಯ ಕುರಿತು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಸುದೀರ್ಘ ಹಾಗೂ ಅರ್ಥಪೂರ್ಣ ಚರ್ಚೆ ನಡೆದಿರುವುದು ಅತ್ಯಂತ ಸ್ವಾಗತಾರ್ಹ.ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಅವರು ಇಂದು ಪ್ರಕಟಣೆ ನೀಡಿ,ಪಶ್ಚಿಮ ಘಟ್ಟ ಪ್ರದೇಶದ ನಿವಾಸಿಗಳ ನೈಜ ಸ್ಥಿತಿಗತಿ, ದೈನಂದಿನ ಸಂಕಷ್ಟಗಳು ಹಾಗೂ ಜೀವನೋಪಾಯದ ಪರವಾಗಿ ಧ್ವನಿ ಎತ್ತಿ, ಅತ್ಯಂತ ಗಂಭೀರವಾಗಿ ಚರ್ಚಿಸಿದ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಎಂದಿದ್ದಾರೆ.
ಈ ವಿಷಯದಲ್ಲಿ ವಾಸ್ತವಾಂಶಗಳನ್ನು ಆಧರಿಸಿ ಮಾನ್ಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರವು ವಿಶೇಷ ಸಮಿತಿಯೊಂದನ್ನು ನೇಮಿಸಲು ತೀರ್ಮಾನಿಸಿರುವುದು ಅತ್ಯಂತ ಶ್ಲಾಘನೀಯವಾದ ಕ್ರಮವಾಗಿದೆ. ಆದಾಗ್ಯೂ, ಈ ಸಮಿತಿಯು ತನ್ನ ವರದಿ ತಯಾರಿಸುವಾಗ ಕೆಳಗಿನ ಪ್ರಮುಖ ಮತ್ತು ಸಂವೇದನಾಶೀಲ ಅಂಶಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಈ ಮೂಲಕ ಆಶಿಸಿ, ಒತ್ತಾಯಿಸುತ್ತೇನೆ:
ಸ್ಥಳೀಯರ ಬದುಕಿಗೆ ಶಾಸನಬದ್ಧ ಹಾಗೂ ಸಾಂವಿಧಾನಿಕ ಭದ್ರತೆ:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಲೆತಲಾಂತರಗಳಿಂದ ನೆಲೆಸಿರುವ ಮೂಲ ನಿವಾಸಿಗಳ, ರೈತರ ಹಾಗೂ ಶ್ರಮಿಕರ ಸಂಕಷ್ಟದ ಬದುಕಿಗೆ ಮತ್ತು ಅವರ ಮೂಲಭೂತ ಜೀವನೋಪಾಯದ ಹಕ್ಕಿಗೆ ಯಾವುದೇ ರೀತಿಯಲ್ಲಿ ಭಂಗ ಬಾರದಂತೆ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಬೇಕು.
ಜನವಸತಿ, ಕೃಷಿ ಮತ್ತು ಅತಿಕ್ರಮಣ ಭೂಮಿಗೆ ಸಂಪೂರ್ಣ ವಿನಾಯಿತಿ:
ಸ್ವಂತ ಜಾಗ, ಸರ್ಕಾರಿ ಅಥವಾ ಇತರ ಯಾವುದೇ ಭೂಮಿಯಲ್ಲಿರುವ ಸಾರ್ವಜನಿಕರ ಮನೆಗಳು, ಕೃಷಿ ಭೂಮಿ, ಅತಿಕ್ರಮಣ ಭೂಮಿ, ನಿವೇಶನಗಳು ಹಾಗೂ ಮೂಲಸೌಕರ್ಯಗಳನ್ನು (ರಸ್ತೆ, ಸಣ್ಣ ಕೈಗಾರಿಕೆ ಇತ್ಯಾದಿ) ಮತ್ತು ಸಂಪೂರ್ಣ ಜನವಸತಿ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ವ್ಯಾಪ್ತಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಿ ಹೊರಗಿಡಬೇಕು.
ನೈಜ ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸುವುದು:
ಕೇವಲ ನೈಜ ಹಾಗೂ ಅರಣ್ಯ ಪ್ರದೇಶವನ್ನು (Forest Area) ಮಾತ್ರವೇ ವೈಜ್ಞಾನಿಕವಾಗಿ ಗುರುತಿಸಿ, ಆ ವ್ಯಾಪ್ತಿಯನ್ನು ಮಾತ್ರವೇ ಅಂತಿಮ ವರದಿಯಲ್ಲಿ ಸೇರ್ಪಡೆಗೊಳಿಸಬೇಕು.
ಸರ್ಕಾರ ನೇಮಿಸುವ ಸಮಿತಿಯು ಪಶ್ಚಿಮ ಘಟ್ಟದ ಜನರ ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಸುದೀರ್ಘವಾಗಿ ಪರಿಶೀಲಿಸಿ, ಜನವಸತಿ ಹಾಗೂ ಕೃಷಿ ಭೂಮಿಯನ್ನು ಹಾಗೂ ಅರಣ್ಯ ಅತಿಕ್ರಮಣ ಭೂಮಿಯನ್ನು ಸಂಪೂರ್ಣವಾಗಿ ಹೊರತುಪಡಿಸಿದ ಸಮಗ್ರ ಹಾಗೂ ವಾಸ್ತವ ಆಧಾರಿತ ವರದಿಯನ್ನು ಸಿದ್ಧಪಡಿಸಬೇಕು. ಈ ವರದಿಯ ಆಧಾರದ ಮೇಲೆ ಮಾನ್ಯ ಸೂಕ್ತ ಮೇಲ್ಮನವಿ ಸಲ್ಲಿಸಲು ಮತ್ತು ವರದಿ ಸಲ್ಲಿಕೆಗೆ ಅಗತ್ಯವಿರುವ ಹೆಚ್ಚುವರಿ ಕಾಲಾವಕಾಶವನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಪಶ್ಚಿಮ ಘಟ್ಟದ ಜನರ ಮನದಲ್ಲಿರುವ ಆತಂಕ, ಭಯ ಹಾಗೂ ಅಭದ್ರತೆಯ ಭಾವನೆಯನ್ನು ಶಾಶ್ವತವಾಗಿ ದೂರ ಮಾಡಿ, ಅವರ ನೆಮ್ಮದಿಯ ಬದುಕಿಗೆ ಸರ್ಕಾರ ತಕ್ಷಣವೇ ಸೂಕ್ತ ಕಾನೂನಾತ್ಮಕ ಪರಿಹಾರ ಒದಗಿಸಬೇಕಾಗಿ ಗೌರವಪೂರ್ವಕವಾಗಿ ವಿನಂತಿಸುತ್ತೇನೆ.ಎಂದು ಹೇಳಿದ್ದಾರೆ.
