Banner Ad

ಸುದ್ದಿ ಕನ್ನಡ ವಾರ್ತೆ
​ಶಿರಸಿ:ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರಲ್ಲಿ ಶಿಕ್ಷಕರೊಬ್ಬರ ಸೂಚನೆಯಂತೆ ಶಾಲಾ ಮಕ್ಕಳು ಸಮವಸ್ತ್ರದಲ್ಲೇ ಶಾಲೆಯ ಮೇಲ್ಛಾವಣಿ ಏರಿ ಸ್ವಚ್ಛಗೊಳಿಸಿದ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಮಳೆಗಾಲದ ಸಮಯದಲ್ಲಿ ಜಾರುವ ಹಂಚುಗಳ ಮೇಲೆ ಪೊರಕೆ ಹಿಡಿದು ಮಕ್ಕಳು ಅಪಾಯಕಾರಿ ರೀತಿಯಲ್ಲಿ ಕೆಲಸ ಮಾಡಿರುವ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಸಣ್ಣಪುಟ್ಟ ದುರಸ್ತಿಗೆ ಖಾತೆಯಲ್ಲಿ ಹಣವಿದ್ದರೂ, ಅದನ್ನು ಉಳಿಸಲು ಮಕ್ಕಳನ್ನು ಇಂತಹ ಅಪಾಯಕಾರಿ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

Banner Ad

​ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ಡಿಡಿಪಿಐ ಅವರು ತಕ್ಷಣ ವರದಿ ನೀಡುವಂತೆ ಸೂಚಿಸಿದ್ದರು. ಇದರನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಿಆರ್‌ಪಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ವಿವರಣೆಯಂತೆ, ಭಾನುವಾರ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಹಂಚು ಒಡೆದು ಒಳಗೆ ನುಗ್ಗಿದ್ದರು. ಸೋಮವಾರ ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಒಡೆದ ಹಂಚನ್ನು ನೋಡಿ ಸ್ವಯಂಪ್ರೇರಿತರಾಗಿ ಅದನ್ನು ಸರಿಪಡಿಸಲು ಮೇಲೇರಿದ್ದರು. ಇದನ್ನು ಗಮನಿಸಿದ ಅತಿಥಿ ಶಿಕ್ಷಕರೊರ್ವರು ತಕ್ಷಣ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಪ್ರಭಾರಿ ಮುಖ್ಯ ಶಿಕ್ಷಕರು ಶಾಲೆಗೆ ಬರುವ ಮುನ್ನವೇ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

 

​ಆದಾಗ್ಯೂ, ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಹಾಗೂ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.

Banner Ad