ಸುದ್ದಿ ಕನ್ನಡ ವಾರ್ತೆ

​ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಸ್ತಾಪಿತ ಮಂಗಳೂರು ಉಚ್ಚ ನ್ಯಾಯಾಲಯದ ಪೀಠಕ್ಕೆ ಸೇರಿಸುವ ಪ್ರಸ್ತಾವನೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೀವ್ರವಾಗಿ ವಿರೋಧಿ ಸಿದ್ದಾರೆ .

 

ಕಳೆದ 18 ವರ್ಷಗಳಿಂದ ನಮ್ಮ ಜಿಲ್ಲೆಯು ಧಾರವಾಡ ಉಚ್ಚ ನ್ಯಾಯಾಲಯ ಪೀಠದ ವ್ಯಾಪ್ತಿಯಲ್ಲಿದ್ದು, ಮುಂದೆಯೂ ಧಾರವಾಡ ಪೀಠದಲ್ಲೇ ಮುಂದುವರಿಯಬೇಕು ಎಂಬುದು ಜಿಲ್ಲೆಯ ಸಮಸ್ತ ಸಾರ್ವಜನಿಕರ ಹಾಗೂ ವಕೀಲರ ನ್ಯಾಯಯುತ ಮತ್ತು ಒಮ್ಮತದ ಬೇಡಿಕೆಯಾಗಿದೆ. ಈ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ.

​ಈ ವಿಷಯಕ್ಕೆ ಸಂಬಂಧಿಸಿದಂತೆ, ಉತ್ತರ ಕನ್ನಡ ಜಿಲ್ಲೆಯ ಪ್ರಾದೇಶಿಕ ಹಿತದೃಷ್ಟಿಯಿಂದ ಜಿಲ್ಲೆಯನ್ನು ಧಾರವಾಡ ಪೀಠದಲ್ಲೇ ಮುಂದುವರಿಸಬೇಕೆಂದು ಕೋರಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇನೆ.

​ನಮ್ಮ ಜಿಲ್ಲೆಯ ಭೌಗೋಳಿಕ ಅಂತರ ಹಾಗೂ ಸಾರಿಗೆ ಅನುಕೂಲತೆಯ ದೃಷ್ಟಿಯಿಂದ ಕಾರವಾರ, ಹಳಿಯಾಳ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಸಾರ್ವಜನಿಕರಿಗೆ ಮಂಗಳೂರಿಗಿಂತ ಧಾರವಾಡ ತಲುಪುವುದು ಅತ್ಯಂತ ಸುಲಭ ಹಾಗೂ ಸಮಯ ಉಳಿತಾಯವಾಗುತ್ತದೆ. ‘ನ್ಯಾಯ ಮನೆಬಾಗಿಲಿಗೆ ತಲುಪಬೇಕು’ ಎಂಬ ತತ್ತ್ವದಡಿಯಲ್ಲೂ ಧಾರವಾಡ ಪೀಠವೇ ನಮಗೆ ಅತ್ಯಂತ ಸಮೀಪ ಹಾಗೂ ಸೂಕ್ತವಾಗಿದೆ.
​ಆದ್ದರಿಂದ, ಜನಸಾಮಾನ್ಯರ ಹಾಗೂ ಕಕ್ಷಿದಾರರ ಹಿತ ಕಾಯುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಪ್ರಸ್ತಾಪಿತ ಮಂಗಳೂರು ಪೀಠಕ್ಕೆ ಸೇರಿಸದೆ, ಧಾರವಾಡ ಉಚ್ಚ ನ್ಯಾಯಾಲಯದ ಪೀಠದಲ್ಲೇ ಮುಂದುವರಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ನಿರ್ದೇಶನ ನೀಡಬೇಕೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸುತ್ತೇನೆ.ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆ ಯಲ್ಲಿ ಹೇಳಿದ್ದಾರೆ.