ಸುದ್ದಿ ಕನ್ನಡ ವಾರ್ತೆ
ಹಳಿಯಾಳ: ಹರಿಯಾಣದ ರೋಹ್ಟಕ್‌ನಲ್ಲಿ ನಡೆಯುತ್ತಿರುವ U-23 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಹಳಿಯಾಳ ತಾಲೂಕಿನ ಜತಕಾ ಹೊಸೂರ ಹಾಗೂ ಗರಡೊಳ್ಳಿ ವಾಡಾ ಗ್ರಾಮದ ಪ್ರತಿಭಾನ್ವಿತ ಪುತ್ರಿಯರಾದ ಕು. ಶಾಲಿನಾ ಸಿದ್ಧಿ ಮತ್ತು ಕು. ಪ್ರಿನ್ಸಿಟಾ ಸಿದ್ಧಿ ಅವರು ಪದಕ ಗೆದ್ದು ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
55 ಕೆಜಿ ವಿಭಾಗದಲ್ಲಿ ಕು. ಶಾಲಿನಾ ಸಿದ್ಧಿ ಬೆಳ್ಳಿ ಪದಕ ಹಾಗೂ 62 ಕೆಜಿ ವಿಭಾಗದಲ್ಲಿ ಕು. ಪ್ರಿನ್ಸಿಟಾ ಸಿದ್ಧಿ ಕಂಚಿನ ಪದಕ ಗೆದ್ದಿರುವ ಹಿನ್ನೆಲೆಯಲ್ಲಿ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ಅವರು ಹೃತೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಶುಭಾಶಯ ಸಂದೇಶ ನೀಡಿರುವ ಶಾಸಕ ಆರ್.ವಿ. ದೇಶಪಾಂಡೆ ಅವರು, “ಕಠಿಣ ಪರಿಶ್ರಮಕ್ಕೆ ಯಶಸ್ಸು, ಆತ್ಮವಿಶ್ವಾಸಕ್ಕೆ ವಿಜಯ ಮತ್ತು ನಿರಂತರ ಸಾಧನೆಗೆ ಗೌರವ ಸದಾ ಜೊತೆಯಾಗಿರುತ್ತದೆ ಎಂಬುದನ್ನು ಈ ಇಬ್ಬರು ಪುತ್ರಿಯರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇವರ ಸಾಧನೆ ಕೇವಲ ವೈಯಕ್ತಿಕ ಗೆಲುವಲ್ಲ; ಉತ್ತರ ಕನ್ನಡ ಜಿಲ್ಲೆಯ ಕ್ರೀಡಾ ಸಾಮರ್ಥ್ಯ, ಯುವಶಕ್ತಿ ಮತ್ತು ಗ್ರಾಮೀಣ ಪ್ರತಿಭೆಯ ಪ್ರತೀಕವಾಗಿದೆ. ಇವರ ಸಾಧನೆ ಇನ್ನಷ್ಟು ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಲಿ” ಎಂದು ತಿಳಿಸಿದ್ದಾರೆ.
