ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಗುರುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಸಹ ಶಿಕ್ಷಕರಾದ ಆನಂದ ಪಿ ರವರು ಮಕ್ಕಳ ಕಾನೂನು ಅರಿವು ಕಾರ್ಯಕ್ರಮವು ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಅತ್ಯಂತ ಪ್ರಮುಖವಾಗಿದೆ. ಇದು ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಮತ್ತು ಅಪರಾಧಗಳ ತಡೆಗಟ್ಟುವಿಕೆಗೆ ಹಾಗೂ ಮಕ್ಕಳ ಸುರಕ್ಷತೆಗೆ ದಾರಿಯಾಗುತ್ತದೆ.
ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಮಗುವಿಗೂ ಕಾನೂನಿನ ಅರಿವು ಅತ್ಯಂತ ಅವಶ್ಯಕವಾಗಿದೆ. ದೇಶದ ಭವಿಷ್ಯವಾಗಿರುವ ತಾವುಗಳು ಕೇವಲ ಹಕ್ಕುಗಳಷ್ಟೇ ಅಲ್ಲದೇ, ಕರ್ತವ್ಯಗಳ ಬಗ್ಗೆಯೂ ತಿಳಿದಿರಬೇಕು. ಕಾನೂನು ಎನ್ನುವುದು ನಮ್ಮ ರಕ್ಷಣೆಗಾಗಿಯೇ ಇರುವ ಒಂದು ದೊಡ್ಡ ಗುರಾಣಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖಾನಾಪೂರ ಪೋಲಿಸ್ ಠಾಣೆಯ ಪಿಎಸ್ಐ ಆದ ಶಿಲ್ಪಾ ಎನ್ ಒ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ಮಗುವಿಗೂ ಶಿಕ್ಷಣದ ಹಕ್ಕು, ಜೀವಿಸುವ ಹಕ್ಕು ಮತ್ತು ಸುರಕ್ಷತೆಯ ಹಕ್ಕನ್ನು ನೀಡಿದೆ. ಆದರೆ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಅನಿಷ್ಟಗಳ ವಿರುದ್ಧ ಧ್ವನಿ ಎತ್ತುವುದು ನಮ್ಮೆಲ್ಲರ ಕರ್ತವ್ಯ. ಒಂದು ವೇಳೆ ನಿಮಗೆ ಅಥವಾ ನಿಮ್ಮ ಸ್ನೇಹಿತರಿಗೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಶೋಷಣೆ ನಡೆದರೆ, ಮೌನವಾಗಿರದೆ ತಕ್ಷಣ ಶಿಕ್ಷಕರಿಗೆ, ಪೋಷಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು.
ವಿಶೇಷವಾಗಿ, ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಇರಬೇಕು. ಯಾರೋ ಅಪರಿಚಿತರು ಮೊಬೈಲ್ ಮೂಲಕ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಕೇಳಿದಾಗ ಎಚ್ಚರಿಕೆಯಿಂದ ಇರಬೇಕು. ಅಪ್ರಾಪ್ತ ವಯಸ್ಸಿನವರು ವಾಹನಗಳನ್ನು ಚಲಾಯಿಸುವುದು ಕಾನೂನು ಬಾಹಿರ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಹಾಗಾಗಿ, ನಾವೆಲ್ಲರೂ ಕಾನೂನುಗಳನ್ನು ಗೌರವಿಸೋಣ. ನಮ್ಮ ಸುರಕ್ಷತೆಗಾಗಿ ಇರುವ ನಿಯಮಗಳನ್ನು ಪಾಲಿಸೋಣ. ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯಂತಹ ಅಧಿಕೃತ ವೇದಿಕೆಗಳಿಂದ ಮಕ್ಕಳ ಹಕ್ಕುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಎಲ್ಲರಿಗೂ ಶಿಕ್ಷಣ ಸಿಗಲಿ, ಯಾರೂ ಶೋಷಣೆಗೆ ಒಳಗಾಗದಿರಲಿ ಎಂಬ ಆಶಯ ನಮ್ಮೆಲ್ಲರದ್ದು ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿಗಳಾದ ಕಾನೇಕರಲೇನ್ ಶಾಲೆಯ ಸಹ ಶಿಕ್ಷಕಿಯಾದ ಸ್ಮೀತಾ ಜಾಧವ ಹೆಣ್ಣುಮಕ್ಕಳ ರಕ್ಷಣೆಗಿಂದ ಅನೇಕ ಜಾಗೃತಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಸ್ವ ಜಾಗೃತಿ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸಮಾಜವನ್ನು ಗೌರವಿಸಬೇಕು.
ಉತ್ತಮ ಪ್ರಜೆಯಾಗಬೇಕು,ಮಕ್ಕಳಿಗೆ ಕಾನೂನಿನ ಅರಿವು ಅವಶ್ಯಕವಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ, ಬಾಲ್ಯ ವಿವಾಹ, ಪೋಕ್ಸೋ-2012, ಮೋಟಾರು ಕಾಯ್ದೆ, ಬಾಲ ಕಾರ್ಮಿಕತೆ, ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಾವಲು ಸಮಿತಿ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಮಾತನಾಡಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಅಪರಾಧಗಳಿಗೆ ಪ್ರಾಥಮಿಕ ಹಂತದಲ್ಲಿ ಕಡಿವಾಣ ಹಾಕಲು ಸಾಧ್ಯ. ದೇಶದ ನಾಳಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಸಂಚಾರಿ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಸಹಕಾರಿಯಾಗಿದೆ, ವಿದ್ಯಾರ್ಥಿ ದೆಸೆಯಲ್ಲಿ ಸಂವಿಧಾನವನ್ನು ತಿಳಿದು ಕಾನೂನಿಗೆ ಗೌರವ ನೀಡುತ್ತಾ ಜೀವನವನ್ನು ಸುಂದರ ಮತ್ತು ಸಾರ್ಥಕವಾಗಿ ರೂಪಿಸಿಕೊಳ್ಳಬೇಕು, ಕಾನೂನು ಅರಿತು ನಡೆದರೆ ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಬಹುದು,ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ, ಆದ್ದರಿಂದ ಪಠ್ಯದ ಜೊತೆ ಕಾನೂನು ಅರಿವನ್ನು ಹೊಂದುವುದು ಮುಖ್ಯವಾಗಿದೆ. ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಹಾಗೂ ಅಶಾಂತಿ ವಾತಾವರಣ ಉಂಟಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರ ಅನಾವಶ್ಯಕ ಕಾರ್ಯಗಳನ್ನು ಮಾಡದೇ ಕೇವಲ ಶಿಕ್ಷಣದತ್ತ ಗಮನ ಹರಿಸಬೇಕು. ಎಲ್ಲರೂ ಕೀಳರಿಮೆ ಬಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಶಾಲಾ ಮಕ್ಕಳು ತಮ್ಮ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗುರು-ಶಿಷ್ಯೆಯ ಸಮಾಗಮ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖಾನಾಪೂರ ಪೋಲೀಸ್ ಠಾಣೆಯ ಪಿಎಸ್ಐ ಆದ ಶಿಲ್ಪಾ ಎನ್ ಓ ರವರು ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರ ಶಿಷ್ಯೆ.ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಪಿಎಸ್ಐ ಮೇಡಂ ಶಿಲ್ಪಾ ಎನ್ ಓ ಅವರನ್ನು ಗೌರವಿಸಿ ಸನ್ಮಾನಿಸಿದರು.ಶಾಲೆಯ ಹಳೆಯ ವಿದ್ಯಾರ್ಥಿನಿ ನಿವೇದಿತಾ ಮಿರಾಶಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿಯಾದ ವಿದ್ಯಾ ಮೇಡಂ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು.
