ಸುದ್ದಿ ಕನ್ನಡ ವಾರ್ತೆ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಶ್ರಯದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಯಶಸ್ವಿಯಾಗಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನವು ಈ ಬಾರಿ ವಿಜಯನಗರ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ನಡೆಯಲಿದೆ.
ಈ ಕುರಿತು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮಾಹಿತಿ ನೀಡಿದ್ದಾರೆ.
2026ರ ಗೀತಾ ಅಭಿಯಾನದ ಅಂಗವಾಗಿ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಮಟ್ಟಕ್ಕೆ ಭಗವದ್ಗೀತೆಯ ಸಾರ್ವಕಾಲಿಕ ಸಂದೇಶವನ್ನು ತಲುಪಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ೧೯ನೇ ವರ್ಷದ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಕಾರ್ಯಕರ್ತರ ಮೂಲಕ ಮನೆಮನೆಗೂ ಗೀತೆಯ ಸಂದೇಶವನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ.
ಭಗವದ್ಗೀತೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಬದುಕಿಗೆ ದಾರಿದೀಪವಾಗಿದ್ದು, ಅದರ ಮೌಲ್ಯಗಳು ಮತ್ತು ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಗ್ರಾಮಗಳಲ್ಲಿ ಗೀತಾ ಪಠಣ, ಉಪನ್ಯಾಸ, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅಭಿಯಾನವನ್ನು ಯಶಸ್ವಿಯಾಗಿ ನಡೆಸಬೇಕಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
