Banner Ad

ಸುದ್ದಿ ಕನ್ನಡ ವಾರ್ತೆ
​ಸಿದ್ದಾಪುರ: ತಾಲೂಕಿನ ಕಾನಸೂರು ಗ್ರಾಪಂ ವ್ಯಾಪ್ತಿಯ ಕೇಡಿದಂಟಕಲ್ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ 70ಕ್ಕೂ ಅಧಿಕ ಸಿಪ್ಪೆ ಅಡಿಕೆ ತುಂಬಿದ್ದ ಚೀಲ ಬೆಂಕಿಗಾಹುತಿಯಾಗಿದೆ.

​ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ವೇಗವಾಗಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಅಡಿಕೆ ಆಹುತಿಯಾಗಿದೆ. ಅಗ್ನಿ ಅವಘಡದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿ ತಮ್ಮಕೈಲಾದ ಪ್ರಯತ್ನದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಮಯೋಚಿತವಾಗಿ ಬೆಂಕಿ ನಿಯಂತ್ರಣಕ್ಕೆ ತಂದ ಪರಿಣಾಮ ಬೆಂಕಿ ಇನ್ನಷ್ಟು ವ್ಯಾಪಿಸುವುದು ತಪ್ಪಿದ್ದು, ಸಮೀಪದ ಇತರ ಆಸ್ತಿಪಾಸ್ತಿಗಳಿಗೆ ಹಾನಿಯಾಗುವುದನ್ನು ತಡೆಗಟ್ಟಲಾಯಿತು.

Banner Ad

​ಕೇಡಿದಂಟಕಲ್ ನಿವಾಸಿ ವಿನಾಯಕ ಮಂಜುನಾಥ ಹೆಗಡೆ ಅವರಿಗೆ ಸೇರಿದ ಅಡಿಕೆ ಸಿಪ್ಪೆಚಾಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸಂಗ್ರಹಿಸಿಟ್ಟಿದ್ದ ಅಡಿಕೆಯ ಶೇ. 90ರಷ್ಟು ಬೆಳೆ ಬೆಂಕಿಗೆ ಆಹುತಿಯಾಗಿದೆ. ವರ್ಷದ ಶ್ರಮದ ಫಲವಾಗಿದ್ದ ಅಡಿಕೆಯನ್ನು ಕ್ಷಣಾರ್ಧದಲ್ಲಿ ಕಳೆದುಕೊಂಡಿರುವ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

​ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಅಗ್ನಿ ಅವಘಡದಿಂದ ಸುಮಾರು 4 ಲಕ್ಷ ರೂ. ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯ ಕುರಿತು ಪಿಡಿಓ,ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

Banner Ad