ಸುದ್ದಿ ಕನ್ನಡ ವಾರ್ತೆ

ಶಿರಸಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಿಶೇಷ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ದೀಪ ಬೆಳಗಿಸಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘

ಸುಧರ್ಮಾ ಸಭಾಭವನ’ದಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀಗಳು ಸ್ವತಃ ಯೋಗಾಸನ ಹಾಗೂ ಧ್ಯಾನದಲ್ಲಿ ಪಾಲ್ಗೊಂಡು, ನೆರೆದಿದ್ದ ಭಕ್ತಾದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಟ್ಟರು.
ಯೋಗ ನಿತ್ಯ ಜೀವನದ ಶಕ್ತಿ
ಈ ಸಂದರ್ಭದಲ್ಲಿ ಆಶೀರ್ವಚನ ನುಡಿದ ಶ್ರೀಗಳು, ಯೋಗವು ಕೇವಲ ದೈಹಿಕ ಕಸರತ್ತಲ್ಲ; ಅದು ಮನಸ್ಸು, ಶರೀರ ಹಾಗೂ ಆತ್ಮವನ್ನು ಜೋಡಿಸುವ ಒಂದು ಅದ್ಭುತ ಪ್ರಕ್ರಿಯೆ. ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಯೋಗ ಮತ್ತು ಪ್ರಾಣಾಯಾಮವನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಈ ಯೋಗವು ಬರೀ ಯೋಗ ದಿನಾಚರಣೆಗೆ ಸೀಮಿತವಾಗದೇ ನಿತ್ಯವೂ ಮಾಡುವ ಒಂದು ಅನುಷ್ಠಾನ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಭಕ್ತಾದಿಗಳು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.