ಸುದ್ದಿ ಕನ್ನಡ ವಾರ್ತೆ
ಶಿರಸಿ: ಇಲ್ಲಿನ ರಾಯರಪೇಟೆಯ ಪ್ರಸಿದ್ಧ ಶ್ರೀ ಮಹಾವಿಷ್ಣು ದೇವರ ಗರ್ಭಗುಡಿಯ ದ್ವಾರಕ್ಕೆ ನೂತನವಾಗಿ ನಿರ್ಮಿಸಲಾದ ಬೆಳ್ಳಿಕವಚದ ರಜತದ್ವಾರವನ್ನು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಮಂಗಳವಾರ ಶಾಸ್ರೋಕ್ತವಾಗಿ ದ್ವಾರಪೂಜೆ ನೆರವೇರಿಸುವ ಮೂಲಕ ದೇವರಿಗೆ ಸಮರ್ಪಿಸಿದರು.

ಶಿರಸಿ ತಾಲೂಕಿನ ಗೌಡ ಸಾರಸ್ವತ ಸಮಾಜದ ಭಕ್ತರು ಭಕ್ತಿಯಿಂದ ನೀಡಿದ ರಜತ ಕಾಣಿಕೆಯನ್ನು ಬಳಸಿಕೊಂಡು, ಪರಿಣಿತ ರಜತ ಶಿಲ್ಪಿಗಳ ಕೈಚಳಕದಲ್ಲಿ ಈ ಆಕರ್ಷಕ ರಜತದ್ವಾರವನ್ನು ಅತ್ಯಂತ ಕಲಾತ್ಮಕವಾಗಿ ರೂಪಿಸಲಾಗಿದೆ.
ಶ್ರೀಮಹಾವಿಷ್ಣು ದೇವರ 186ನೇ ವರ್ಧಂತಿ ಉತ್ಸವದ ಪ್ರಯುಕ್ತ ಈ ಸಮರ್ಪಣಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪರಮಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ದೇವಸ್ಥಾನದಲ್ಲಿ ಸಗ್ರಹಮುಖ ವಾಸ್ತುಶಾಂತಿ ಹಾಗೂ ಸಂಯುಕ್ತ ಲಘುವಿಷ್ಣು ಹವನ ಸೇರಿದಂತೆ ವಿವಿಧ ವೈದಿಕ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿದವು.
ಈ ಮಹತ್ವದ ಪುಣ್ಯಕಾರ್ಯದಲ್ಲಿ ದೇವಸ್ಥಾನದ ಮೊಕ್ತೇಸರರಾದ ವಿಷ್ಣುದಾಸ ಕಾಸರಕೋಡ, ಉಪಾಧ್ಯಕ್ಷ ಅಶೋಕ ಪೈ ಕಾಗಾಲ, ಕಾರ್ಯದರ್ಶಿ ಪಾಂಡುರಂಗ ಪೈ ಹಾಗೂ ಆಡಳಿತ ಸಮಿತಿ ಸಮಸ್ತರರು, ನೂರಾರು ಜಿ.ಎಸ್.ಬಿ. ಸಮಾಜ ಬಾಂಧವರು ಮತ್ತು ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು.