ಸುದ್ದಿ ಕನ್ನಡ ವಾರ್ತೆ
​​ಶಿರಸಿ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸ ಅತ್ಯಂತ ಮಹತ್ವದ್ದಾಗಿದ್ದು ಈ ಮಾಸದಲ್ಲಿ ಮಾಡುವ ಯಾವುದೇ ದಾನ-ಧರ್ಮ, ನಾಮಸ್ಮರಣೆ, ಪ್ರದಕ್ಷಿಣೆ ಇತ್ಯಾದಿ ಪುಣ್ಯ ಕಾರ್ಯಗಳು ಅಧಿಕ ಫಲ ನೀಡಿ ಮನುಷ್ಯನ ಜೀವನವನ್ನು ಉಜ್ಜೀವನಗೊಳಿಸುತ್ತದೆ. ಅಧಿಕ ಮಾಸದ ಮಾಸ ಪುರುಷ ಪುರುಷೋತ್ತಮ ಅಂದರೆ ವಿಷ್ಣುವಿನ ಮೂಲರೂಪವಾಗಿದ್ದು, ಇದೇ ಮಾಸದಲ್ಲಿ ನಗರದ ಶ್ರೀ ಮಹಾವಿಷ್ಣು ದೇವರ ವರ್ಧಂತಿ ಉತ್ಸವದ ಪೂರ್ವಸಿದ್ಧತಾ ಕಾರ್ಯಗಳು ಆರಂಭವಾಗಿರುವುದು ಶಿರಸಿಯ ಭಕ್ತರ ಸೌಭಾಗ್ಯವಾಗಿದೆ. ಆ ಕಾರಣದಿಂದಲೇ ತಾವು ಇಲ್ಲಿನ ಭಕ್ತರ ಗಿಡದ ದಿನಂತಿಯ ಮೇರೆಗೆ ಶಿರಸಿಗೆ ಬಂದು ಉಪಸ್ಥಿತಿ ನೀಡಿದ್ದೇವೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಯತಿವರ್ಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮಿಗಳು ನುಡಿದರು.

​ಅವರು ಮಹಾವಿಷ್ಣು ದೇವರ 186ನೇ ವರ್ಧಂತಿ ಉತ್ಸವದ ನಿಮಿತ್ತ ವಿದ್ಯಾರಾಜ ಕಲಾಕ್ಷೇತ್ರದಲ್ಲಿ ದೀಪದೀಪಿಸಿ ಸ್ವಾಗತ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

​ಕಳೆದ ವರ್ಷ ಪರ್ತಗಾಳಿ ಮಠದ ಸಾರ್ಧಪಂಚ ಶತಾಬ್ದಿಯ ವೇಳೆಗೆ ಶಿರಸಿ ತಾಲೂಕಿನ ವಿವಿಧ ಊರುಗಳಲ್ಲಿ ದಾಶರಥಿ ಜಪ ಕೇಂದ್ರಗಳನ್ನು ಸ್ಥಾಪಿಸಿ 28 ಕೋಟಿಗೂ ಮಿಕ್ಕಿ ಶ್ರೀರಾಮತಾರಕ ಮಂತ್ರ ಪಠನ ಮಾಡಿ ಮಠದ ಸೂಚನೆಯನ್ನು ಪಾಲಿಸಿದ್ದು ಒಂದು ದಾಖಲೆಯಾಗಿದೆ. ಭಾರತದಾದ್ಯಂತ ಸಮಾಜದ ಜನರಿರುವ ಕಡೆಗಳಲ್ಲೆಲ್ಲ ಇಂಥ ಜಪ ಕೇಂದ್ರಗಳಿಂದ ಒಟ್ಟು 593 ಕೋಟಿ ಜಪಾನುಷ್ಠಾನ ನಡೆದಿದ್ದು ಕೂಡ ಒಂದು ದಾಖಲೆಯಾಗಿದೆ. ಇದರಿಂದಾಗಿ ನಮ್ಮ 550 ಕೋಟಿ ಜಪದ ಗುರಿಗಿಂತ ಹೆಚ್ಚು ಜಪಾನುಷ್ಠಾನ ನಡೆದಿದ್ದು ಶ್ಲಾಘನೀಯವಾಗಿದೆ ಎಂದರು.
​’ಸತತಂ ಚಿಂತಯೇತ್ ಅನಂತಂ, ಅಂತ್ಯಕಾಲೇ ವಿಶೇಷತಃ’ ಅಂದರೆ ಸತತ ಅಭ್ಯಾಸದಿಂದ ಕೈಗೊಂಡ ಜಪ-ತಪಾದಿ ಪುಣ್ಯಕಾರ್ಯಗಳು ಮರಣ ಕಾಲದಲ್ಲಿ ನಮ್ಮ ನೆರವಿಗೆ ಬಂದು ಉತ್ತಮ ಸದ್ಗತಿ ಹೊಂದಲು ನೆರವಾಗುತ್ತದೆ. ಆದ್ದರಿಂದ ಜಪಾನುಷ್ಠಾನವನ್ನು ಸತತ ಅಭ್ಯಾಸ ಬಲವಾಗಿಸಿಕೊಳ್ಳಲು ಶಿಷ್ಯ ವರ್ಗಕ್ಕೆ ಕರೆ ನೀಡಿದರು.

​ಸಂಜೆ 7 ಗಂಟೆಗೆ ಆಗಮಿಸಿದ ಶ್ರೀಗಳನ್ನು ಶಿರಸಿ ಅರ್ಬನ್ ಬ್ಯಾಂಕ್ ವೃತ್ತದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮಠಕ್ಕೆ ಕರೆತರಲಾಯಿತು. ವೇ.ಮೂ. ಗಳಾದ ಪ್ರಸನ್ನ ಭಟ್, ಶ್ರೀಚರಣ ಆಚಾರ್ಯ, ಹರೀಶ ಭಟ್ಟ ಮತ್ತು ಅನಂತಭಟ್ಟ ಬಾಳೂರ ರವರ ವೇದಘೋಷದೊಂದಿಗೆ ಆರಂಭವಾದ ಸ್ವಾಗತ ಕಾರ್ಯಕ್ರಮದಲ್ಲಿ ಜೀವೋತ್ತಮ ಭಜನಾ ಮಂಡಳಿಯ ಮಹಿಳಾ ಸದಸ್ಯರು ಗುರುವಂದನಾ ಗೀತೆ ಹಾಡಿದರು. ಶ್ರೀಗಳ ಪಾದಪೂಜೆಯ ನಂತರ ಮೋಕ್ಷೇಸರ ದಿಷುದಾಸ ಕಾಸರಕೋಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಪಾಂಡುರಂಗ ಪೈ ಕಾರ್ಯಕ್ರಮಗಳ ವಿವರ ನೀಡಿದರು. ವಾಸುದೇವ ಶಾನಭಾಗ ಮತ್ತು ರಾಮ ಹರಿ ಕಿಣಿಯವರು ನಿರ್ವಹಿಸಿದರು. ಅಶೋಕ ಪೈ, ಗುರುರಾಜ ಬಾಳೂರ, ಮದನ ನಾಯಕ, ಅರುಣಾ ನಾಯಕ, ದೀಪಕ ಭಟ್ಟ ಹಾಗೂ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ವಿವೇಕಾನಂದ ಕಾಮತ ವೇದಿಕೆಯಲ್ಲಿದ್ದರು. ಜು.19ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಗಳು ನಡೆಯಲಿವೆ. ಜು.16ರಂದು ವರ್ಧಂತಿಯ ದಿನ ಮಹಾವಿಷ್ಣು ದೇವರ ಗರ್ಭಗುಡಿಗೆ ನಿರ್ಮಿಸಿದ ರಜತ ದ್ವಾರದ ಲೋಕಾರ್ಪಣೆ ಶ್ರೀಗಳ ಹಸ್ತದಿಂದ ನಡೆಯಲಿದೆ.