ಸುದ್ದಿ ಕನ್ನಡ ವಾರ್ತೆ

ಬೆಳಗಾವಿ:
ಸುಮಾರು ನಾಲ್ಕು ದಶಕಗಳ ಕಾಲ ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಜನರ ವಿಶ್ವಾಸ ಗಳಿಸಿದ್ದ ಹಿರಿಯ ವೈದ್ಯ ಡಾ. ದಿನೇಶ್ ಭಟ್ಕಳ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ಆಘಾತ ಉಂಟುಮಾಡಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಡಾ. ದಿನೇಶ್ ಭಟ್ಕಳ್ ಅವರು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಸುಮಾರು 40 ವರ್ಷಗಳ ಕಾಲ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಅಂಕೋಲಾದ ಕೆಎಲ್‌ಇ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ನಾಲ್ಕು ತಿಂಗಳ ಹಿಂದೆ ಅವರಿಗೆ ಲಂಗ್ಸ್ ಕ್ಯಾನ್ಸರ್ ಪತ್ತೆಯಾಗಿತ್ತು. ಚಿಕಿತ್ಸೆಗಾಗಿ ಅವರು ಬೆಳಗಾವಿಯ ಟಿಳಕವಾಡಿ ಪ್ರದೇಶದ ಮಂಡೋಳಿ ರಸ್ತೆಯಲ್ಲಿರುವ ಮನೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಕ್ಯಾನ್ಸರ್‌ನಿಂದಾಗಿ ತೀವ್ರ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಈ ನೋವು ಸಹಿಸಲಾಗದಷ್ಟು ಹೆಚ್ಚಾಗುತ್ತಿತ್ತು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಎದ್ದ ತಕ್ಷಣವೇ ಅವರಿಗೆ ಮತ್ತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ನೋವು ತಾಳಲಾರದೆ ಅವರು ಮನೆಯಲ್ಲಿದ್ದ ರಿವಾಲ್ವರ್ ತೆಗೆದುಕೊಂಡು ಗ್ಯಾಲರಿಯತ್ತ ತೆರಳಿ, ಅಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಡಾ. ದಿನೇಶ್ ಭಟ್ಕಳ್ ಅವರು ತಮ್ಮ ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.
ಕೆಎಲ್‌ಇ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರಿಗೂ ಸಂದೇಶ ಕಳುಹಿಸಿ, “ನೀವು ಇಷ್ಟು ವರ್ಷ ನನಗೆ ಸಹಾಯ ಮಾಡಿದ್ದೀರಿ. ನನಗೆ ತೀವ್ರ ಎದೆನೋವು ಇದೆ. ನಾನು ಅದರಿಂದ ಬಳಲುತ್ತಿದ್ದೇನೆ. ಆದ್ದರಿಂದ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ” ಎಂದು ಉಲ್ಲೇಖಿಸಿದ್ದರೆಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಈ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಡಾ. ದಿನೇಶ್ ಭಟ್ಕಳ್ ಅವರ ನಿಧನದ ಸುದ್ದಿ ತಿಳಿದ ವೈದ್ಯಕೀಯ ವಲಯ, ಸಹೋದ್ಯೋಗಿಗಳು, ಆಪ್ತರು ಹಾಗೂ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ. ಜೀವನಪೂರ್ತಿ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದ ಹಿರಿಯ ವೈದ್ಯರೇ, ಅನಾರೋಗ್ಯದ ನೋವಿನಿಂದ ಇಂತಹ ನಿರ್ಧಾರಕ್ಕೆ ಬಂದಿರುವುದು ಎಲ್ಲರನ್ನೂ ಮೌನಗೊಳಿಸಿದೆ.
40 ವರ್ಷ ಸೇವೆ ಸಲ್ಲಿಸಿದ ವೈದ್ಯ
ಡಾ. ದಿನೇಶ್ ಭಟ್ಕಳ್ ಅವರು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರು. ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಶಿಸ್ತಿನ, ಸರಳ ಸ್ವಭಾವದ ಹಾಗೂ ಜನಸ್ನೇಹಿ ವೈದ್ಯರೆಂದು ಪರಿಚಿತರಾಗಿದ್ದರು. ಅವರ ಆತ್ಮಹತ್ಯೆ ಕುಟುಂಬದ ಜೊತೆಗೆ ವೈದ್ಯ ವಲಯಕ್ಕೂ ದೊಡ್ಡ ಆಘಾತವಾಗಿ ಪರಿಣಮಿಸಿದೆ.
ನೋವು, ನಿರಾಶೆ, ಒಂದು ದುರಂತ ಅಂತ್ಯ
ಕ್ಯಾನ್ಸರ್‌ ಪತ್ತೆಯಾದ ಬಳಿಕ ಅವರು ಶಾರೀರಿಕ ನೋವಿನಿಂದ ಬಳಲುತ್ತಿದ್ದರು. ಈ ನೋವಿನ ಬಗ್ಗೆ ಅವರು ಕೆಲ ಆಪ್ತರೊಂದಿಗೆ ಹಂಚಿಕೊಂಡಿದ್ದರು ಎನ್ನಲಾಗಿದೆ.