ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಡಾ ಗ್ರಾಮಕ್ಕೆ ಬಿಎಸ್ಎನ್ಎಲ್ 4G ಟವರ್ ಸ್ಥಾಪನೆಗೆ ಸಂಬಂಧಿಸಿದ ಪ್ರಕ್ರಿಯೆ (Processing) ನಡೆಯುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಿಎಸ್ಎನ್ಎಲ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಜೆಟಿಓ (JTO) ಅವರನ್ನು ಸಂಪರ್ಕಿಸಿದಾಗ, ಪಾಂಜೇಲಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬಿಎಸ್ಎನ್ಎಲ್ ಟವರ್ನಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಕೆಲವು ಗ್ರಾಮಗಳಿಗೆ ಸಿಗ್ನಲ್ ತಲುಪುತ್ತದೆಯೇ ಎಂದು ಪ್ರಶ್ನಿಸಿದಾಗ, ಸಾಮಾನ್ಯವಾಗಿ 2 ಕಿ.ಮೀ ವ್ಯಾಪ್ತಿಯೊಳಗೆ ಸಿಗ್ನಲ್ ದೊರೆಯುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆದರೆ, ದಟ್ಟ ಅರಣ್ಯ, ಗುಡ್ಡಗಾಡು ಹಾಗೂ ಭೌಗೋಳಿಕ ಅಡೆತಡೆಗಳಿರುವ ಪ್ರದೇಶಗಳಲ್ಲಿ ಸಿಗ್ನಲ್ ಗುಣಮಟ್ಟ ಕಡಿಮೆಯಾಗಬಹುದು ಅಥವಾ ಲಭ್ಯವಾಗದೇ ಇರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಶೇಷವಾಗಿ ಮುಡಿಯೇ (Mudiye), ಕಾರ್ಟೋಳಿ (Kartoli), ಕಸಂಬಾ (Kasamba), ಖಾನಗಾಂವ (Khanaganv) ಹಾಗೂ ವಾಗೇಲಿ (Vageli) ಸೇರಿದಂತೆ ಕರಂಜೋಯಡಾ ಗ್ರಾಮದ ವ್ಯಾಪ್ತಿಯ ಕೆಲವು ಊರುಗಳಿಗೆ ಟವರ್ ಸಿಗ್ನಲ್ ಸಮರ್ಪಕವಾಗಿ ತಲುಪುವುದು ತುಂಬಾ ಕಷ್ಟವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆದರೂ, ಕರಂಜೋಯಡಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಬಿಎಸ್ಎನ್ಎಲ್ 4G ಟವರ್ ಶೀಘ್ರದಲ್ಲಿ ಕಾರ್ಯಾರಂಭಿಸಿ ಮೊಬೈಲ್ ಸಂಪರ್ಕ ವ್ಯವಸ್ಥೆ ಉತ್ತಮವಾಗುವ ನಿರೀಕ್ಷೆಯಲ್ಲಿ ಇದ್ದಾರೆ.
