Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲ್ಲೂಕಿನ ಶೇಡಿಕೆರೆ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಯ ಒಳಗೆ ಕಳ್ಳರು ನುಗ್ಗಿದ್ದಾರೆ. ದೇವರ ಮುಂದೆ ತೂಗುತ್ತಿದ್ದ ಗಂಟೆ ಸೇರಿ ಅಲ್ಲಿದ್ದ 21 ಸಾವಿರ ರೂ ಮೌಲ್ಯದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅರಬೈಲ್ ಗ್ರಾಮದ ಕಸಬೆ ಬಳಿ ಶೇಡಿಕೆರೆ ಮಹಾಗಣಪತಿ ದೇವಸ್ಥಾನವಿದೆ. ಐತಿಹಾಸಿಕ ಹಿನ್ನಲೆಯಿರುವ ಈ ದೇಗುಲಕ್ಕೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ. ಅತ್ಯಂತ ಶ್ರದ್ಧಾ-ಭಕ್ತಿಯಿಂದ ಇಲ್ಲಿ ಪೂಜೆ-ಪುನಸ್ಕಾರ ನಡೆದು ಬರುತ್ತಿದ್ದು, ಸದ್ಯ ಆ ದೇಗುಲದ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ದೇವಾಲಯದ ಒಳಗೆ ನುಗ್ಗಿದ ದುಷ್ಟರು ಅಲ್ಲಿದ್ದ ಅನೇಕ ವಸ್ತುಗಳನ್ನು ದೋಚಿದ್ದಾರೆ.

Banner Ad

ಎಪ್ರಿಲ್ 18ರ ಸಂಜೆ ದೇವಾಲಯದಲ್ಲಿ ಎಲ್ಲವೂ ಸಹಜವಾಗಿದ್ದು, ಮರುದಿನ ಬೆಳಗ್ಗೆ ಇಡಗುಂದಿ ಬಳಿಯ ಕೋಮಡಿಯ ಸುಣಜೋಗದ ಶಿವರಾಮ ಕೃಷ್ಣ ಭಟ್ಟ ಅವರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಗರ್ಭಗುಡಿ ಮುಂದೆ ತೂಗುತ್ತಿದ್ದ ನಾಲ್ಕು ದೊಡ್ಡ ಗಂಟೆಗಳು ಕಾಣೆಯಾಗಿರುವುದನ್ನು ಅವರು ನೋಡಿದ್ದಾರೆ. ಗರ್ಭಗುಡಿಯ ಒಳಗಿದ್ದ ಎರಡು ಗಂಟೆಗಳು ಸಹ ಕಾಣಿಸಿಲ್ಲ. ಎಲ್ಲಾ ಸೇರಿ 10 ಹಿತ್ತಾಳೆ ಗಂಟೆಗಳನ್ನು
ಕಳ್ಳರು ಅಪಹರಿಸಿದ್ದಾರೆ.

ಜೊತೆಗೆ ದೇವಾಲಯದ ಪಕ್ಕದ ಕೋಣೆಯ ಬೀಗ ಒಡೆದು ಅಲ್ಲಿದ್ದ ತಾಮ್ರದ ಕೊಡ, ಹಿತ್ತಾಳೆಯ ಆರತಿ, ಹಿತ್ತಾಳೆ ತಾಟು, ಹಿತ್ತಾಳೆ ಚಂಬು, ದೀಪ, ಆಲ್ಯುಮಿನಿಯಂ ಹಾಗೂ ಸ್ಟೀಲ್ ತೋಪುಗಳನ್ನು ಕದ್ದಿದ್ದಾರೆ. ಹಂಡೆಯನ್ನು ಸೇರಿ ಒಟ್ಟು 21,900ರೂ ಮೌಲ್ಯದ ದೇವಾಲಯದ ಸಾಮಗ್ರಿಗಳು ಕಳ್ಳರ ಪಾಲಾಗಿದೆ.
ಈ ಬಗ್ಗೆ ಶಿವರಾಮ ಭಟ್ಟ ಅವರು ಊರಿನವರಲ್ಲಿ ಚರ್ಚಿಸಿದ್ದು, ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳರ ಶೋಧ ಶುರು ಮಾಡಿದ್ದಾರೆ.

Banner Ad